ನವದೆಹಲಿ: ಉಕ್ರೇನ್ ಮೇಲೆ ಸೇನಾ ದಾಳಿ ನಡೆಸಿರುವ ರಷ್ಯಾಗೆ ನಿರ್ಬಂಧಗಳ ಸರಣಿ ಮುಂದುವರೆದಿದ್ದು, ಇದೀಗ ಅಂತಾರಾಷ್ಟ್ರೀಯ ಫುಟ್ ಬಾಲ್ ಸಂಸ್ಥೆ ಫೀಫಾ ವಿಶ್ವಕಪ್ ಟೂರ್ನಿಯಿಂದ ರಷ್ಯಾ ತಂಡವನ್ನು ಅಮಾನತು ಮಾಡಿದೆ.
ಫೀಫಾ ಮತ್ತು ಯುಇಎಫ್ಎ ಅಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ರಷ್ಯಾದ ಫುಟ್ಬಾಲ್ ಕ್ಲಬ್ ಗಳು ಮತ್ತು ರಾಷ್ಟ್ರೀಯ ತಂಡಗಳನ್ನು ಫಿಫಾ ಮತ್ತು ಯುಇಎಫ್ಎ ಎಲ್ಲಾ ಸ್ಪರ್ಧೆಗಳಿಂದ ಅಮಾನತುಗೊಳಿಸಿದೆ. ಅಂತಾರಾಷ್ಟ್ರೀಯ ಮತ್ತು ಯುರೋಪಿಯನ್ ಫುಟ್ಬಾಲ್ ಆಡಳಿತ ಮಂಡಳಿಗಳು ‘ಮುಂದಿನ ಆದೇಶದವರೆಗೆ’ ರಷ್ಯಾ ತಂಡಗಳನ್ನು ನಿಷೇಧಿಸಲಾಗುವುದು ಎಂದು ಹೇಳಲಾಗಿದೆ.
ಇದರರ್ಥ ರಷ್ಯಾದ ಪುರುಷರ ತಂಡವು ಮುಂದಿನ ತಿಂಗಳು ನಡೆಯಲಿರುವ ತಮ್ಮ ವಿಶ್ವಕಪ್ ಪ್ಲೇ-ಆಫ್ ಪಂದ್ಯಗಳನ್ನು ಆಡುವುದಿಲ್ಲ ಮತ್ತು ಅಂತೆಯೇ ಈ ಬೇಸಿಗೆಯ ಯುರೋ 2022 ಸ್ಪರ್ಧೆಯಿಂದ ಮಹಿಳಾ ತಂಡವನ್ನು ಕೂಡ ನಿಷೇಧಿಸಲಾಗಿದೆ. ಈಗಾಗಲೇ ರಷ್ಯಾದ ಸ್ಪಾರ್ಟಕ್ ಮಾಸ್ಕೋ ತಂಡವನ್ನು ಯುರೋಪಾ ಲೀಗ್‌ನಿಂದ ಹೊರಹಾಕಲಾಗಿದೆ. ಅಲ್ಲದೆ ಯುಇಎಫ್ಎ ರಷ್ಯಾದ ಇಂಧನ ದೈತ್ಯ Gazprom ನೊಂದಿಗೆ ತನ್ನ ಪ್ರಾಯೋಜಕತ್ವವನ್ನು ಸಹ ಕೊನೆಗೊಳಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಫಿಫಾ ಮತ್ತು ಯುಇಎಫ್‌ಎ ಅಧಿಕಾರಿಗಳು, ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ವಿರುದ್ಧವಾಗಿ ಜಾಗತಿಗ ಫುಟ್ಬಾಲ್ ಒಂದಾಗಿದ್ದು, ಉಕ್ರೇನ್‌ನಲ್ಲಿ ಬಾಧಿತವಾಗಿರುವ ಎಲ್ಲಾ ಜನರೊಂದಿಗೆ ಸಂಪೂರ್ಣ ಐಕಮತ್ಯದಲ್ಲಿದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯು ಗಮನಾರ್ಹವಾಗಿ ಮತ್ತು ವೇಗವಾಗಿ ಸುಧಾರಿಸುತ್ತದೆ. ಇದರಿಂದಾಗಿ ಫುಟ್ಬಾಲ್ ಮತ್ತೆ ಜನರ ನಡುವೆ ಏಕತೆ ಮತ್ತು ಶಾಂತಿಗಾಗಿ ಒಗ್ಗೂಡಲಿದೆ ಎಂದು ಅವರು ಹೇಳಿದರು.
