ಮಂಗಳೂರು, ಫೆ. 28 : ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸೋಮವಾರದಂದು ನಗರ ಕುಲಶೇಖರದ ಕೊರ್ಡೆಲ್ ಹಾಲ್‌ನಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 3163 ಕೋಟಿ ರೂ. ಮೊತ್ತದಲ್ಲಿ 164 ಕಿ.ಮೀ. ಉದ್ದದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸುರಂಗ ಮಾರ್ಗದ ತಜ್ಞ ಧರ್ಮಾಧಿಕಾರಿಯವರು ಹೈವೇಯ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ ಅಧ್ಯಯನ ನಡೆಸಿ ವಿಶ್ವಾಸ. ಶೀಘ್ರವೇ ಡಿಪಿಆರ್ ಸಿದ್ಧಪಡಿಸಿ, ಇದಕ್ಕೆ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಶೀಘ್ರ ಅನುಮತಿ ಪಡೆಯಲು ಮುಖ್ಯಮಂತ್ರಿಯವರ ಸಹಕಾರ ಪಡೆದು ಕಾರ್ಯಕ್ಕೆ ಚಾಲನೆ ಶೀಘ್ರವೇ ನೀಡಲಾಗುವುದು. ಭಾರತ್ ಮಾಲ ಯೋಜನೆಯಡಿ ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ನವಮಂಗಳೂರು, ಕಾರವಾರ ಬಂದರುಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದರು. ಬೆಂಗಳೂರು- ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿಯ 26 ಕಿ.ಮೀ. ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.


ಮಂಗಳೂರಿಗೆ ಆಗಮಿಸಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಮುಖ್ಯಮಂತ್ರಿ ಬಸವಾರ್ಜ್ ಬೊಮ್ಮಾಯಿ ಸೇರಿದಂತೆ ಗಣ್ಯರು ಸ್ವಾಗತಿಸಿದರು. ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಸುನಿಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಎಸ್ ಅಂಗಾರ ಭಾಗವಹಿಸಿದ್ದರು.ಸಮಾರಂಭದಲ್ಲಿ ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮಂಗಳೂರಿನಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಸಾವಿರಾರು ಕೋಟಿ ಯೋಜನೆಗಳಿಗೆ ಚಾಲನೆ ನೀಡಿದರು.
ಸುರತ್ಕಲ್ ಟೋಲ್ ರದ್ದು ಬಗ್ಗೆ ದೆಹಲಿಯಲ್ಲಿ ಸಭೆ
ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ ಪ್ಲಾಝಾ ರದ್ದು ಗೊಳಿಸುವ ನಿಟ್ಟಿನಲ್ಲಿ ಕೆಲವು ಕಾನೂನು ತೊಡಕುಗಳಿವೆ. ಈ ಸಮಸ್ಯೆ ಬಗೆಹರಿಸಲು ಶೀಘ್ರದಲ್ಲಿ ದೆಹಲಿಯಲ್ಲಿ ಸಭೆ ಕರೆಯಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಮೂಲ ಸೌಕರ್ಯ ಕಲ್ಪಿಸಲಾಗುವುದು. 2024ರ ಡಿಸೆಂಬರ್‌ಗೆ ರಾಜ್ಯದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳನ್ನು ಅಮೆರಿಕದ ರಸ್ತೆಗಳಿಗೆ ಸಮನಾಗಿ ಅಭಿವೃದ್ಧಿಪಡಿಸಲಾಗುವುದು. ಭಾರತ್ ಮಾಲ ಎರಡನೇ ಹಂತದ ಬಳಿಕ ಈಗ ಪರ್ವತ್ ಮಾಲ ಮೂಲಕ ರೋಪ್ ವೇಯಂತ ಯೋಜನೆ ಕೈಗೆತ್ತಿಕೊಂಡಿದ್ದೇವೆ ಎಂದವರು ಹೇಳಿದರು.
