ಉಡುಪಿ: ಕಾಪು ಪಡುಗ್ರಾಮದಲ್ಲಿನ ಮುಸ್ಲಿಂ ಕುಟುಂಬವೊಂದು ತಲೆಮಾರುಗಳಿಂದ ಮಾರಿಗುಡಿ ದೇವಸ್ಥಾನದಲ್ಲಿ ದೇವರಿಗೆ ವಾದ್ಯ ನುಡಿಸಿ ಸೇವೆ ಸಲ್ಲಿಸುತ್ತಿದ್ದು, ಈ ಮೂಲಕ ಕೋಮು ಸೌಹಾರ್ದತೆ ಮೆರೆಯುತ್ತಿದೆ.
ಶೇಖ್ ಜಲೀಲ್ ಸಾಹೇಬ್ ವಂಶಸ್ಥರು ಕಾಪುವಿನಲ್ಲಿ ಮಾರಿ ನೆಲೆನಿಂತ ದಿನದಿಂದಲೂ ದೇವರಿಗೆ ವಾದ್ಯ ಸೇವೆ ನೀಡುತ್ತಾ ಬಂದಿದ್ದಾರೆ.
‘ಅಪ್ಪ ಬಾಬು ಸಾಹೇಬ್, ತಾತ ಇಮಾಮ್ ಸಾಹೇಬ್, ಮುತ್ತಾತ ಮುಗ್ದಂ ಸಾಹೇಬ್ ಹೀಗೆ ನಮ್ಮ ಪೂರ್ವಜರು ಕಾಪುವಿನ ಮಾರಿಗುಡಿಯಲ್ಲಿ ನಿಷ್ಠೆ ಹಾಗೂ ಪ್ರೀತಿಯಿಂದ ವಾದ್ಯ ನುಡಿಸುವ ಚಾಕರಿ ಮಾಡಿದ್ದಾರೆ. ಪರಂಪರಾಗತವಾಗಿ ಬಂದಿರುವ ದೇವರ ಸೇವೆಯನ್ನು ಅಷ್ಟೇ ಪ್ರೀತಿಯಿಂದ ನಾನು ಮುಂದುವರಿಸುತ್ತಿದ್ದೇನೆ. ದೇವರಿಗೆ ಸೇವೆ ಸಲ್ಲಿಸುವುದು ನನ್ನ ಕರ್ತವ್ಯ. ಕೋಲ ಮತ್ತು ಆಶ್ಲೇಷಾ ಬಲಿ ಆಚರಣೆಗಾಗಿ ಬೇರೆ ಬೇರೆ ಸ್ಥಳಗಳಿಗೆ ವಾದ್ಯ ನುಡಿಸಿ ಸೇವೆ ಸಲ್ಲಿಸುತ್ತಿರುತ್ತೇನೆ. ಆದರೆ, ಇದರಿಂದ ವರ್ಷದ ಸಾಕಷ್ಟು ಶುಕ್ರವಾರ ನಮಾಜ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಮನೆಯಲ್ಲಿದ್ದಾಗಲೆಲ್ಲಾ ನಮಾಜ್ ಮಾಡುತ್ತಿರುತ್ತೇನೆಂದು ಜಲೀಲ್ ಅವರು ಹೇಳಿದ್ದಾರೆ.
9ನೇ ತರಗತಿವರೆಗೆ ಓದಿರುವ ಜಲೀಲ್, ಸಂಪ್ರದಾಯ ಯಾರು ಮುಂದುವರೆಸಿಕೊಂಡು ಹೋಗುತ್ತಾರೆಂಬ ಭಯ ನನಗಿಲ್ಲ. ಕುಟುಂಬದ ಇನ್ನಾವುದೇ ವ್ಯಕ್ತಿಯನ್ನು ನನ್ನ ಬಳಿಕ ನೇಮಿಸಲಾಗುತ್ತದೆ. ನಾಲ್ಕನೇ ತಲೆಮಾರಿನವರೆಗೂ ಮುಂದುವರೆದುಕೊಂಡು ಬಂದಿದ್ದು, ಮುಂದಿನ ತಲೆಮಾರಿಗೂ ಮುಂದುವರೆಯುವ ಭರವಸೆಯಿದೆ ಎಂದು ತಿಳಿಸಿದ್ದಾರೆ.
‘ತಾತ ಕಾಪು ಇಮಾಮ್ ಸಾಹೇಬ್ 60 ವರ್ಷ ಮಾರಿಗುಡಿಯಲ್ಲಿ ವಾದ್ಯ ನುಡಿಸಿದ್ದಾರೆ. ಅಜ್ಜ ತೀರಿಹೋದ ನಂತರ ತಂದೆ ಬಾಬು ಸಾಹೇಬ್ ನುಡಿಸಿದ್ದರು. ಕಳೆದ 35 ವರ್ಷಗಳಿಂದ ನಾನು ವಾದ್ಯ ನುಡಿಸುತ್ತಿದ್ದೇನೆ. ಧರ್ಮ ಬೇರೆಯಾದರೂ ದೇವರ ಸೇವೆ ಮಾಡುವುದರಲ್ಲಿ ಆತ್ಮತೃಪ್ತಿ ಇದೆ. ಗುರು ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಮುರಿಯುವ ಮನಸ್ಸು ನನಗಿಲ್ಲ. ಎಂದು ಜಲೀಲ್ ಹೇಳಿದ್ದಾರೆ.
Discussion about this post