ಶ್ರೀನಗರ: ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (SKIMS) ಸ್ಟಾಫ್ ನರ್ಸ್, ಕಾಶ್ಮೀರ ಪಂಡಿತ ಸಮುದಾಯದ ಯುವತಿ ಸರಳಾ ಭಟ್(ಅಂದಾಜು ವಯಸ್ಸು 27) ಅವರ ಅಪಹರಣ, ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯ ಮತ್ತು ಕ್ರೂರ ಹತ್ಯೆಗೆ ಸಂಬಂಧಿಸಿದಂತೆ ಕಾಶ್ಮೀರದ ತನಿಖಾ ಸಂಸ್ಥೆ (ಎಸ್‌ಐಎ) ಸೋಮವಾರ ಶ್ರೀನಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯಕ್ಕೆ 737 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ.
1990ರ ಏಪ್ರಿಲ್ ತಿಂಗಳಲ್ಲಿ ಶ್ರೀನಗರದ ಸೌರಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (SKIMS) ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸರಳಾ ಭಟ್ ಅವರನ್ನು ಭಯೋತ್ಪಾದಕರು ಅಪಹರಿಸಿದ್ದರು. ಆಸ್ಪತ್ರೆಯಲ್ಲಿದ್ದ ಕೆಲವು ಸಹೋದ್ಯೋಗಿಗಳಿಂದಲೇ ಭಯೋತ್ಪಾದಕರಿಗೆ ಇವರ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಅಪಹರಣದ ನಂತರ ಸರಳಾ ಭಟ್ ಅವರನ್ನು ಸುದೀರ್ಘ ಕಾಲ ಕೂಡಿಟ್ಟು, ಅವರ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ನಂತರ ಏಪ್ರಿಲ್ 19, 1990ರಂದು ಅವರನ್ನು ಗುಂಡಿಕ್ಕಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಶವವನ್ನು ರಸ್ತೆಗೆ ಎಸೆಯಲಾಗಿತ್ತು. ಕಾಶ್ಮೀರಿ ಪಂಡಿತರನ್ನು ಕಣಿವೆಯಿಂದ ಓಡಿಸಲು ನಡೆದ ವ್ಯವಸ್ಥಿತ ಹಿಂಸಾಚಾರಗಳಲ್ಲಿ ಈ ಘಟನೆಯೂ ಒಂದಾಗಿತ್ತು.

ಅಪಹರಣ ಮತ್ತು ಹತ್ಯೆಯನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವಲ್ಲಿ ಆಗಿನ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF)ನ ಮುಖ್ಯ ಕಮಾಂಡರ್ ಮೊಹಮ್ಮದ್ ಯಾಸೀನ್ ಮಲಿಕ್ ಜತೆಗೆ ಖುರ್ಷಿದ್ ಅಹ್ಮದ್ ಚಲ್ಕೂ, ಅಬ್ದುಲ್ ಹಮೀದ್ ಶೇಖ್, ಮೊಹಮ್ಮದ್ ಯೂಸುಫ್ ಸೋಫಿ ಅಲಿಯಾಸ್ ಇದ್ರೀಸ್ ಮತ್ತು ಗುಲಾಮ್ ಮೊಹಮ್ಮದ್ ತಪ್ಲೂ ಎಂಬ ಮತಾಂಧ ದುರುಳರ ಪಾತ್ರವಿರುವುದು ಎಸ್‌ಐಎ ತನಿಖೆಯಿಂದ ಬಹಿರಂಗವಾಗಿದೆ.
ಅಬ್ದುಲ್ ಹಮೀದ್ ಶೇಖ್, ಮೊಹಮ್ಮದ್ ಯೂಸುಫ್ ಸೋಫಿ ಅಲಿಯಾಸ್ ಇದ್ರೀಸ್ ಮತ್ತು ಗುಲಾಮ್ ಮೊಹಮ್ಮದ್ ಟ್ಯಾಪ್ಲೂ ಎಂಬ ಉಗ್ರರು ಈಗಾಗಲೇ ಸಾವನ್ನಪ್ಪಿದ್ದಾರೆ. ಆದರೆ, ಈ ಪ್ರಕರಣದ ರೂವಾರಿ ಯಾಸೀನ್ ಮಲಿಕ್ ಇದೀಗ ಮತ್ತೊಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಸಂಸ್ಥೆ ತಿಳಿಸಿದೆ. ಪರಾರಿಯಾಗಿರುವ ಆಖುರ್ಷಿದ್ ಅಹ್ಮದ್ ಚಲ್ಕೂ ಎಂಬ ಉಗ್ರನ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

Discover more from Coastal Times Kannada
Subscribe to get the latest posts sent to your email.







Discussion about this post