ಮಂಗಳೂರು, ಜುಲೈ 1: ಭಾರೀ ಮಳೆಗೆ ನಗರದ ಕಂಕನಾಡಿ ನಾಗುರಿ ಬಳಿಯ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆಗಳಿದ್ದ ಹಳೆಯ ಹಂಚಿನ ಕಟ್ಟಡದ ಮೇಲೆ ಗುಡ್ಡ ಕುಸಿದು ಬಿದ್ದಿದ್ದು ಎರಡು ಕುಟುಂಬಗಳಿಗೆ ಸೇರಿದ ಇಬ್ಬರು ಮಕ್ಕಳು ಮತ್ತು ಒಬ್ಬರು ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.
ನಿನ್ನೆ ರಾತ್ರಿಯಿಂದ ಮಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಮಳೆಯ ತೀವ್ರತೆಗೆ ಮನೆ ಹಿಂಭಾಗದಲ್ಲಿದ್ದ ಗುಡ್ಡ ಕುಸಿದು ಬಿದ್ದಿದೆ. ಇದರಿಂದಾಗಿ ಕೆಳ ಭಾಗದಲ್ಲಿ ನಾಲ್ಕು ಪ್ರತ್ಯೇಕ ಕುಟುಂಬಗಳು ವಾಸವಿದ್ದ ಹಳೆ ಮನೆಯ ಕಟ್ಟಡಕ್ಕೆ ಮಣ್ಣು ಬಿದ್ದಿದ್ದು ಒಂದು ಭಾಗ ತೀವ್ರ ಹಾನಿಯಾಗಿದೆ. ಬಿಹಾರ ಮೂಲದ ಲಾಲ್ ಬಾಬು (37) ಮತ್ತು ಆತನ ಪತ್ನಿ ಇಂದು (34) ಹಾಗೂ ಅವರ ನಾಲ್ಕು ಮಕ್ಕಳು ಒಂದು ಮನೆಯಲ್ಲಿ ಎಂಟು ವರ್ಷಗಳಿಂದ ನೆಲೆಸಿದ್ದರು. ಅಲ್ಕಾ(14), ಅನುಷ್ಕಾ(11), ಅನಾಮಿಕ (7) ಮತ್ತು ತನು (3) ಎಂಬ ಮಕ್ಕಳಿದ್ದು ಈ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಬಗ್ಗೆ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ ಸಿಬಂದಿ ಶಂಕಿಸಿದ್ದಾರೆ. ಅನಾಮಿಕ ಮತ್ತು ತನು ಎಂಬ ಇಬ್ಬರು ಸಣ್ಣ ಮಕ್ಕಳು ದುರಂತದಲ್ಲಿ ಸಾವನ್ನಪ್ಪಿದ್ದಾಗಿ ಪೊಲೀಸರು ತಿಳಿಸಿದ್ದಾರೆ.


ಹಾನಿಗೀಡಾದ ಮತ್ತೊಂದು ಮನೆಯಲ್ಲಿ ಉಡುಪಿ ಜಿಲ್ಲೆಯ ಮೂಲದ ಬಾಲಕೃಷ್ಣ (40) ಮತ್ತು ಅವರ ಪತ್ನಿ ಶಾಂತ (35) ಎಂಬವರು ಕಳೆದ ಎಂಟು ತಿಂಗಳಿನಿಂದ ನೆಲೆಸಿದ್ದು ಈ ಪೈಕಿ ಶಾಂತ ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಶಂಕೆ ಇದೆ. ಇವರ ದೇಹವನ್ನು ಅಗ್ನಿಶಾಮಕ ಸಿಬಂದಿ ಹೊರಕ್ಕೆ ತಂದಿದ್ದು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಯ್ಯಲಾಗಿದೆ.
ನಸುಕಿನ ವೇಳೆಗೆ ಮಣ್ಣು ಕುಸಿದ ಘಟನೆ ನಡೆದಿದ್ದು ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಕುಟುಂಬಸ್ಥರು ಹಠಾತ್ ಘಟನೆಯಲ್ಲಿ ಮಣ್ಣಿನಡಿಗೆ ಬಿದ್ದಿದ್ದರು. ಉದ್ದಕ್ಕೆ ಒಂದೇ ಕಟ್ಟಡದಲ್ಲಿರುವ ಹಳೆಯ ಹಂಚಿನ ಮನೆಯನ್ನು ನಾಲ್ಕು ಬಾಡಿಗೆ ಮನೆಗಳನ್ನಾಗಿಸಿ ಪ್ರತ್ಯೇಕ ಬಾಡಿಗೆ ಕೊಡಲಾಗಿತ್ತು. ಭಾರೀ ಮಳೆಗೆ ಹಿಂಬದಿಯಿದ್ದ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ದುರಂತ ಸಂಭವಿಸಿದೆ. ನಾಗುರಿಯಲ್ಲಿರುವ ಕಂಕನಾಡಿ ನಗರ ಠಾಣೆಯ ಹಿಂಭಾಗದಲ್ಲೇ ಘಟನೆ ನಡೆದಿದ್ದು ಮೊದಲಿಗೆ ಪೊಲೀಸರು ಮತ್ತು ಸ್ಥಳೀಯರು ಸೇರಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ಸಿಬಂದಿ ಆಗಮಿಸಿ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.


Discover more from Coastal Times Kannada
Subscribe to get the latest posts sent to your email.







Discussion about this post