ಮಂಗಳೂರು: ಮೊದಲ ಬಾರಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಂವಾದವನ್ನು ಆಯೋಜಿಸುವ ಮೂಲಕ ಆಯುಕ್ತ ಎನ್. ಶಶಿಕುಮಾರ್, ಜನಸ್ನೇಹಿ ಪೊಲೀಸ್‌ಗಾಗಿ ಸಿಬ್ಬಂದಿ ಆತ್ಮಸ್ಥೈರ್ಯ ವೃದ್ಧಿಸುವ ಹೆಜ್ಜೆ ಇಟ್ಟರು.
ಎಸ್‍ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ನಿಮ್ಮ ಕೆಳ ಹಂತದ ಸಿಬ್ಬಂದಿಯಲ್ಲಿನ ವಿಶೇಷ ಕೌಶಲಗಳನ್ನು ಅರಿತುಕೊಂಡು ಕರ್ತವ್ಯಕ್ಕೆ ನಿಯೋಜಿಸಿ. ಕೆಲವರಲ್ಲಿ ಸಂವಹನ ಕೌಶಲ, ಅಪರಾಧ ಪತ್ತೆ, ಸಾರ್ವಜನಿಕ ಸಂಪರ್ಕ, ವಿಶಿಷ್ಟ ಬುದ್ಧಿಮತ್ತೆ ಇರುತ್ತದೆ. ಅವರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ಜನಸ್ನೇಹಿ ಪೊಲೀಸ್ ರೂಪಿಸಿ’ ಎಂದರು.
ಬೆಂಗಳೂರಿನ ಕಾನ್‌ಸ್ಟೆಬಲ್‌ಗಳು ಕೊಲೆ ಪ್ರಕರಣವೊಂದನ್ನು ಭೇದಿಸುವಲ್ಲಿ ಪಟ್ಟ ಪ್ರಯತ್ನವನ್ನು ವಿವರಿಸಿದ ಅವರು, ‘ಕಾನೂನು ಸಾಧಕ–ಬಾಧಕಗಳ ಕುರಿತು ತಳಹಂತದಿಂದ ಹಿರಿಯ ಅಧಿಕಾರಿಗಳ ತನಕ ಎಲ್ಲರೂ ಸ್ಪಷ್ಟತೆ ಹೊಂದಿರಬೇಕು. ಆಗ, ಸಿಬ್ಬಂದಿ ಕೌಶಲ ಹಾಗೂ ಸಾಮರ್ಥ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು. ಕೌಶಲಕ್ಕೆ ಬೆಲೆ ಸಿಕ್ಕಾಗ ಸಿಬ್ಬಂದಿಯೂ ಸಂಭ್ರಮ ಪಡುತ್ತಾರೆ’ ಎಂದು ಸಂತಸ ವ್ಯಕ್ತಪಡಿಸಿದರು. ಬಳಿಕ ಆಯುಕ್ತರು ಪೊಲೀಸರ ಅಹವಾಲುಗಳನ್ನೂ ಆಲಿಸಿದರು.
ಅನೈತಿಕ ಪೊಲೀಸ್ ಗಿರಿ, ಮಾದಕ ದ್ರವ್ಯ ದಂಧೆ, ಅಪರಾಧ ಪ್ರಕರಣಗಳು ಸೇರಿದಂತೆ ನಗರದಲ್ಲಿ ನಡೆಯುವ ಪ್ರಮುಖ ಅಪರಾಧ ಲಕ್ಷಣಗಳ ಬಗ್ಗೆ ಚರ್ಚೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮುಖ್ಯ ಅತಿಥಿಯಾಗಿದ್ದರು. ಡಿಸಿಪಿ ಚನ್ನವೀರಪ್ಪ ಹಡಪದ್, ಎಸಿಪಿ ರಂಜಿತ್ ಕುಮಾರ್ ಬಂಡಾರು, ಸಂಚಾರ ವಿಭಾಗದ ಎಸಿಪಿ ನಟರಾಜ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post