ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ವೇಳೆ ಹೋಟೆಲ್‌ನಲ್ಲಿ ಆತಿಥ್ಯ ನೀಡಿದ ತಂಡದ ನೇತೃತ್ವವನ್ನು ಮಂಗಳೂರು ಮೂಲದ ಯುವತಿ ಸುಮಲ್ ಸಂದೀಪ್ ಕೋಟ್ಯಾನ್ ವಹಿಸಿದ್ದರು.
ಪ್ರಧಾನಿಯವರ ಆಹಾರ ಸುರಕ್ಷೆ ಸೇರಿದಂತೆ ಹಲವು ವಿಚಾರಗಳ ಜವಾಬ್ದಾರಿ ಅವರದಾಗಿತ್ತು. ಈ ಹಿಂದೆಯೂ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ನೀಡಿದ್ದಾಗ ಸುಮಲ್ ಆತಿಥ್ಯ ನಿರ್ವಹಣೆ ಮಾಡಿದ್ದರು.
ಕುಂದಾಪುರ ಮೂಲಕ ಜುವೆಲ್ ಆಫ್ ಇಂಡಿಯಾ ವುಡ್‌ಲ್ಯಾಂಡ್ಸ್ ಡಿಸಿ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಹೋಟೆಲ್ ಸಿಇಒ ಆನಂದ ಪೂಜಾರಿಯವರ ಸೂಚನೆ ಮೇರೆಗೆ ಸತತ ಎರಡನೇ ಬಾರಿ ಆತಿಥ್ಯ ನೀಡುವ ತಂಡದಲ್ಲಿದ್ದರು.
ತಮ್ಮ ಆತಿಥ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಬೆಳಗ್ಗೆ 5 ಗಂಟೆಗೆ ದಿನಚರಿ ಆರಂಭವಾಗುತ್ತಿತ್ತು. ನಮ್ಮ ತಂಡದಲ್ಲಿ ಎಂಟು ಮಂದಿ ಇದ್ದರು. ಮೋದಿಯವರ ಅಡುಗೆ ತಯಾರಿ ಕುರಿತಂತೆ ವಿಶೇಷವಾಗಿ ನಿಗಾ ವಹಿಸುವ ಜವಾಬ್ದಾರಿ ನನ್ನ ಮೇಲಿತ್ತು. ಆಹಾರದ ಸುರಕ್ಷತೆ, ಕೋವಿಡ್ ನಿಯಮ ಪಾಲನೆ ಕುರಿತಾಗಿಯೂ ಗಮನ ಹರಿಸಬೇಕಿತ್ತು. ದಕ್ಷಿಣ ಭಾರತದ ಇಡ್ಲಿ ಸಾಂಬಾರ್ ತಿಂದು ಮೋದಿ ಖುಷಿ ಪಟ್ಟರು. ಅವರ ಸರಳತೆ, ಸಹೃದಯತೆ ನೋಡಿ ಖುಷಿಯಾಯಿತು ಎಂದು ವಿವರಿಸಿದ್ದಾರೆ.
ಸುಮಲ್ ಅವರು ಮಂಗಳೂರು ತಾಲೂಕು ಪಂಚಾಯಿತಿ ನಿಕಟಪೂರ್ವ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸುನೀಲ್ ಕುಮಾರ್ ಗಂಜಿಮಠ ಅವರ ಕಿರಿಯ ಸಹೋದರಿಯ ಪುತ್ರಿ.
ಮಂಗಳೂರಿನ ಮೇರಿಹಿಲ್ ನಿವಾಸಿಗಳಾದ ಗೋಪಾಲ್ ಪೂಜಾರಿ ಹಾಗೂ ಸುಪಲ ದಂಪತಿಯ ಪುತ್ರಿಯಾಗಿರುವ ಸುಮಲ್ 10 ವರ್ಷಗಳಿಂದ ಅಮೆರಿಕದ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪತಿ ಸಂದೀಪ್ ಕೋಟ್ಯಾನ್ ಕೂಡ ಅಲ್ಲಿನ ಐಟಿ ಕಂಪೆನಿ ಉದ್ಯೋಗಿಯಾಗಿದ್ದಾರೆ.