ಮಂಗಳೂರು, ಸೆ.29: ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅಲೋಪತಿ ಜೊತೆಗೆ ಸಂಯುಕ್ತ ಆಯುಷ್ ಆಸ್ಪತ್ರೆ ಅಧಿಕೃತವಾಗಿ ಆರಂಭಗೊಂಡಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಆಯುಷ್ ಮಿಷನ್ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ಸ್ಥಾಪನೆ ಮಾಡಲಾಗಿದೆ.
ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ, ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಮಂಗಳೂರಿಗೆ ಆಗಮಿಸಿದ್ದಾಗ ಅಧಿಕೃತವಾಗಿ ಆಯುಷ್ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಯಿತು.
ಈಗಾಗಲೇ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ ಆರಂಭವಾಗಿದ್ದು, ಆಯುಷ್ ಒಳಪಟ್ಟ ಎಲ್ಲ ರೀತಿಯ ಪದ್ಧತಿಗಳಾದ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹೋಮಿಯೋಪತಿಗಳ ವಿಶೇಷ ಚಿಕಿತ್ಸಾ ಸೌಲಭ್ಯಗಳು ಆಸ್ಪತ್ರೆಯಲ್ಲಿ ಲಭ್ಯವಿದೆ. ಎಲ್ಲಾ ಆಯುಷ್ ಪದ್ಧತಿಗಳು ಹಾಗೂ ಅಲೋಪತಿ ಸೌಲಭ್ಯಗಳು ಒಂದೇ ಸೂರಿನಡಿ ದೊರೆಯಲಿರುವ ದೇಶದ ಮೊತ್ತಮೊದಲ ಆಸ್ಪತ್ರೆ ಇದಾಗಿದೆ.
ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯ ಪಂಚಕರ್ಮ, ಜಪ, ಕಾರಸವ ಅಭ್ಯಂಗ ಮತ್ತಿತರ ಚಿಕಿತ್ಸೆ ಲಭಿಸಲಿದೆ. ನ್ಯಾಚುರೋಪತಿ ಪದ್ಧತಿಯ ಜಲಚಿಕಿತ್ಸೆ, ಆಕ್ಯೂಪಂಚರ್, ಆಕ್ಯುಪ್ರೆಶರ್, ಕಲರ್‌ಥೆರಪಿ, ಫಿಸಿಯೋಥೆರಪಿ ಮುಂತಾದ ಚಿಕಿತ್ಸೆಗಳು ಹಾಗೂ ಯುನಾನಿ ಚಿಕಿತ್ಸಾ ಪದ್ಧತಿಯಲ್ಲಿ ಫಲಕ, ಹಿಜಾಮ ಮುಂತಾದ ಆಯುಷ್ ಚಿಕಿತ್ಸಾ ಪದ್ದತಿ ಇರಲಿದೆ.
ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಆಡಳಿತ ವಿಭಾಗ, ಎರಡನೇ ಮಹಡಿಯಲ್ಲಿ 20 ಹಾಸಿಗೆಗಳ ಜನರಲ್ ವಾರ್ಡ್ ಹಾಗೂ 5 ಸ್ಪೆಷಲ್ ವಾರ್ಡ್ ಮತ್ತು ಪಂಚಕರ್ಮ ಆಯುಷ್ ಥೆರಪಿ ಸೌಲಭ್ಯವಿರುವ ಮಹಿಳಾ ವಿಭಾಗ, ಮೂರನೇ ಮಹಡಿಯಲ್ಲಿ 20 ಹಾಸಿಗೆಗಳ ಜನರಲ್ ವಾರ್ಡ್ ಹಾಗೂ 5 ಸ್ಪೆಷಲ್ ವಾರ್ಡ್ ಹಾಗೂ ಮಾಡ್ಯುಲರ್ ಸೌಲಭ್ಯಗಳಿವೆ.
ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖಾ ವತಿಯಿಂದ ಪ್ರಾರಂಭಿಸಲಾದ ಮಕ್ಕಳಿಲ್ಲದ ದಂಪತಿಗಳಿಗೆ ಸೃಷ್ಟಿ ಯೋಜನೆ ಆರಂಭಿಸಲಾಗಿದೆ. ಅಪೌಷ್ಟಿಕತೆ ನಿವಾರಣೆಗಾಗಿ ಪ್ರಾರಂಭಿಸಲಾದ “ಸಮೃದ್ಧಿ”, ಮಕ್ಕಳ ಮಾನಸಿಕ ಬೆಳವಣಿಗೆಗೆ ಮನನಮಿತ್ರ ಯೋಜನೆಗಳು ಲಭ್ಯವಿರಲಿವೆ.