ಮಂಗಳೂರು, ನ 30: ಅದು 240 ವರ್ಷಗಳ ಹಿಂದಿನ ಘಟನೆ. ಟಿಪ್ಪು ಕರಾವಳಿ ಕ್ರೈಸ್ತರ ಮೇಲೆ ಮಾಡಿದ ಕ್ರೌರ್ಯ ಆ ಸಮುದಾಯವನ್ನು ಪತರುಗುಟ್ಟುವಂತೆ ಮಾಡಿತ್ತು. ಆದರೆ ಆ ಸಂಧರ್ಭದಲ್ಲಿ ಕ್ರೈಸ್ತರ ಜೊತೆ ನಿಂತಿದ್ದು ಆ ಮೂರು ಬಂಟ ಗುತ್ತು ಮನೆತನಗಳು. ಅಂದು ಪ್ರಾಣ ಉಳಿಸಿದ ಬಂಟರನ್ನು ಕ್ರೈಸ್ತ ಸಮುದಾಯ ಇಂದಿಗೂ ಗೌರವಿಸುತ್ತಾ ಬಂದಿದೆ.
ಮಂಗಳೂರಿನ ಕಿನ್ನಿಗೋಳಿ ಸಮೀಪ ದಾಮಸ್ ಕಟ್ಟೆಯ ಚರ್ಚ್‌ನಲ್ಲಿ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಮೂರು ಬಂಟ ಮನೆತನಗಳನ್ನು ಈ ಬಾರಿಯೂ ಗೌರವಿಸಲಾಗಿದೆ. ಕರಾವಳಿ ಕ್ರೈಸ್ತರ ಮೇಲೆ ಆಕ್ರಮಣ ಮಾಡುತ್ತಾ ಟಿಪ್ಪು ಸುಲ್ತಾನ್ 1784ರ ಫೆಬ್ರವರಿ 24 ರಂದು ಕಿನ್ನಿಗೋಳಿಯ ಕಿರೆಂ ಚರ್ಚ್ ಅನ್ನು ನಾಶ ಪಡಿಸಲು ಮುಂದಾದಾಗ ಬಂಟ ಸಮುದಾಯದ ಮೂರು ಮನೆತನಗಳಾದ ಐಕಳ ಬಾವ, ತಾಳಿಪಾಡಿಗುತ್ತಯ ಹಾಗೂ ಏಳಿಂಜೆ ಅಂಗಡಿಗುತ್ತು ಕುಟುಂಬಗಳ ಸದಸ್ಯರು ಎದೆಗುಂದರೆ ಟಿಪ್ಪು ಸೈನ್ಯ ವನ್ನು ಎದುರಿಸಿ ಚರ್ಚ್ ರಕ್ಷಣೆ ಮಾಡಿದ್ದರು.
ಚರ್ಚ್ ವ್ಯಾಪ್ತಿಗೆ ಬರುವ ನೂರಾರು ಕುಟುಂಬಗಳನ್ನು ಬಂಟರು ರಕ್ಷಣೆ ಮಾಡಿದ್ದರು. ಅನೇಕ ಕ್ರೈಸ್ತರನ್ನು ತಮ್ಮ ಮನೆಯಲ್ಲೇ ಉಳಿಸಿ ಕ್ರೈಸ್ತರನ್ನು ತಮ್ಮ ಮನೆಯ ಸದಸ್ಯರೆಂದು ಹೇಳಿ ಟಿಪ್ಪು ಸೈನಿಕರ ದಾರಿ ತಪ್ಪಿಸಿದರು. ಬಂಟ ಮಹಿಳೆಯರ ರೀತಿ ಕ್ರೈಸ್ತ ಮಹಿಳೆಯರಿಗೆ ಚಿನ್ನ ತೊಡಿಸಿ ತಮ್ಮ ಮನೆಯವರಂತೆ ನೋಡಿಕೊಂಡರು.ಮಂಗಳೂರಿನಿಂದ ಶ್ರೀರಂಗಪಟ್ಟಣದ ತನಕ ಕ್ರೈಸ್ತರನ್ನು ನಡೆಸಿಕೊಂಡೇ ಹೋಗಿ ಟಿಪ್ಪು ಮೈಸೂರಿನಲ್ಲಿ ಬಂಧನದಲ್ಲಿರಿಸಿಕೊಂಡಿದ್ದ..ಟಿಪ್ಪು ಮರಣದ ಬಳಿಕ ಮರಳಿ ಊರಿಗೆ ಬಂದ ಕ್ರೈಸ್ತರನ್ನು ಆದರದಿಂದ ಸ್ವಾಗತಿಸಿದ ಕ್ರೈಸ್ತರಿಗೆ ಸಹಾಯ ನೀಡಿ ಚರ್ಚ್ ನ್ನು ಹಸ್ತಾಂತರಿಸಿದರು. ಅಂದು ಬಂಟ ಮನೆತನ ಮಾಡಿದ ಸಹಾಯಕ್ಕೆ ದಾಮಸ್ ಕಟ್ಟೆಯ ಕ್ರೈಸ್ತರು ಇಂದಿಗೂ ಆ ಮೂರು ಬಂಟ ಮನೆತನಗಳಿಗೆ ಪ್ರತಿ ವರ್ಷ ಚರ್ಚ್‌ನ ವರ್ಷಾವಧಿಯ ಸಂದರ್ಭದಲ್ಲಿ ಚರ್ಚ್ ಪ್ರಮುಖರು ವೀಳ್ಯದೆಲೆ ಅಡಿಕೆ, ಬಾಳೆಗೊನೆ ನೀಡಿ ಧನ್ಯವಾದ ಸಮರ್ಪಣೆ ಮಾಡುತ್ತಿದ್ದಾರೆ.
ಈ ಬಾರಿಯೂ ಬಂಟ ಮನೆತನಗಳನ್ನು ಚರ್ಚ್‌ಗೆ ಕರೆಯಿಸಿ ಗೌರವ ನೀಡಲಾಗಿದೆ. ಮೂರು ಗುತ್ತಿನ ಎಂಟನೇ ತಲೆಮಾರಿನ ಪ್ರತಿನಿಧಿಗಳು ಚರ್ಚ್ ಬಂದು ಗೌರವ ಸ್ವೀಕರಿಸಿದ್ದಾರೆ. ಈ ಗೌರವಕ್ಕೆ ಪ್ರತಿಯಾಗಿ ಮೂರು ಗುತ್ತುಗಳಲ್ಲಿ ನಡೆಯುವ ದೈವಾರಾಧನೆಗೆ ಚರ್ಚ್ ಧರ್ಮಗುರುಗಳಿಗೆ ಆಮಂತ್ರಣ ನೀಡಲಾಗುತ್ತದೆ. ಪ್ರತೀ ಶುಭ ಕಾರ್ಯದ ಸಂಧರ್ಭದಲ್ಲಿ ಬಂಟ ಮನೆತನಗಳು ಮೊದಲು ಚರ್ಚ್‌ಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಮೂಲಕ ಚರ್ಚ್ ಸೌಹಾರ್ದತೆಯ ಕೊಂಡಿಯಾಗಿ ಇಂದಿಗೂ ಸರ್ವ ಧರ್ಮದ ಜನರ ಪ್ರೀತಿಗೆ ಒಳಗಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post