ಮಂಗಳೂರು : ಚಾರ್ಮಾಡಿ ಘಾಟ್‌ನಲ್ಲಿ ಈಗ ರಸ್ತೆ ಅಭಿವೃದ್ಧಿಯಿಂದಾಗಿ ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚಾರ್ಮಾಡಿಯ ಸುತ್ತಲಿನ 50 ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಆಂಬುಲೆನ್ಸ್ ಸೇವೆ ಶೀಘ್ರ ಆರಂಭಿಸಲಿದ್ದೇನೆ ಎಂದು ಸಮಾಜ ಸೇವಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ತಿಳಿಸಿದರು.
ಮಂಗಳೂರು ಪ್ರೆಸ್‌ಕ್ಲಬ್ ಬುಧವಾರ ಏರ್ಪಡಿಸಿದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ರಾಜ್ಯೋತ್ಸವ ಪುರಸ್ಕಾರದಲ್ಲಿ ಸರ್ಕಾರ ನೀಡಿದ 5 ಲಕ್ಷ ರೂ.ಮೊತ್ತವನ್ನು ಆಂಬುಲೆನ್ಸ್ ಖರೀದಿಗೆ ಬಳಸುತ್ತಿದ್ದೇನೆ. ಉಳಿದ ಸುಮಾರು 3 ಲಕ್ಷ ರೂ.ಮೊತ್ತವನ್ನು ನಾವೇ ಕುಟುಂಬಸ್ಥರು ಟ್ರಸ್ಟ್ ರಚಿಸಿ ಬ್ಯಾಂಕ್ ಸಾಲ ಪಡೆದು ಭರಿಸುತ್ತೇವೆ ಎಂದರು.
ಈಗ ಟ್ರಸ್ಟ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆಂಬುಲೆನ್ಸ್ ವಾಹನ ಕೆಲವೇ ದಿನಗಳಲ್ಲಿ ಸೇವೆಗೆ ಲಭ್ಯವಾಗಲಿದೆ. ಚಾರ್ಮಾಡಿ ಆಸುಪಾಸಿನಲ್ಲಿ ಯಾರು, ಯಾವುದೇ ಸಮಯದಲ್ಲಿ ಕರೆ ಮಾಡಿದರೂ ನಮ್ಮ ಆಂಬುಲೆನ್ಸ್ ಉಚಿತ ಸೇವೆ ನೀಡಲಿದೆ ಎಂದು ಹಸನಬ್ಬ ಹೇಳಿದರು. ಹಣ, ಆಸ್ತಿ, ಅಂತಸ್ತು ಇದ್ದರೆ ಸಾಲದು. ಮನುಷ್ಯನಿಗೆ ಮಾನವೀಯತೆ ಮುಖ್ಯ. ಅಪಘಾತ ಸಂಭವಿಸಿದಾಗ ಮೊದಲು ಗಾಯಾಳುವನ್ನು ಉಪಚರಿಸಬೇಕು. ಅಪಘಾತದ ಫೋಟೋ ತೆಗೆಯುವುದು, ಅಪಘಾತಕ್ಕೆ ಕಾರಣರಾದವರೊಂದಿಗೆ ಜಗಳ ಕಾಯುವುದು ಸರಿಯಲ್ಲ. ಪ್ರಥಮವಾಗಿ ಜೀವ ಉಳಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು,ಉಳಿದೆಲ್ಲವೂ ನಂತರ. ಅಪಘಾತ ವೇಳೆ ಪೊಲೀಸ್ ಕೇಸು, ಸಾಕ್ಷೃಕ್ಕೆ ಹೆದರಿ ಗಾಯಾಳುಗಳನ್ನು ಉಪಚರಿಸಲು ಹಿಂದೇಟು ಹಾಕಬಾರದು ಎಂದು ಅವರು ಹೇಳಿದರು.
V4 ನ್ಯೂಸ್‌ನ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಕುಂದರ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. , ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮಹಮ್ಮದ್ ಆರಿಫ್ , ಕಾರ್ಯಕಾರಿ ಸಮಿತಿ ಸದಸ್ಯರಾದ ಆತ್ಮಭೂಷಣ ಭಟ್, ದಯಾ ಕುಕ್ಕಾಜೆ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಬಿ.ಎನ್.ಪುಷ್ಪರಾಜ್ ಸ್ವಾಗತಿಸಿ , ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಸತೀಶ್ ಇರಾ ಕಾರ್ಯಕ್ರಮ ಸಂಯೋಜಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post