ಉಳ್ಳಾಲ: ಕಳೆದ ಶುಕ್ರವಾರ ಉಳ್ಳಾಲ ಭಾರತ್ ಪಿಯು ಕಾಲೇಜಿನಲ್ಲಿ ಹಿಜಾಬಿಗೆ ವಿರೋಧ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕಾಲೇಜು ಆಡಳಿತವು ವಿದ್ಯಾರ್ಥಿಗಳಿಗೆ ಮಂಗಳವಾರದವರೆಗೆ ರಜೆ ನೀಡಿತ್ತು. ಬುಧವಾರ ಮತ್ತೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಬಂದಿದ್ದು, ಕಾಲೇಜಿನ ಪ್ರಾಂಶುಪಾಲೆ ಕಲಾವತಿ ಅವರು ಎಲ್ಲಾ ವಿದ್ಯಾರ್ಥಿಗಳಿಗೂ ಆನ್ ಲೈನ್ ತರಗತಿ ನಡೆಸಲಾಗುವುದೆಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ನಮಗೆ ಅರ್ಥ ಆಗಲ್ಲ. ಪರೀಕ್ಷೆ ಬೇರೆ ಹತ್ರ ಬರ್ತಿದೆ. ಪಾಠ ಸಂಪೂರ್ಣಗೊಂಡಿಲ್ಲ, ಆನ್ ಲೈನ್ ನಮ್ಮಲ್ಲಿ ಮೊಬೈಲ್ ಕೂಡಾ ಇಲ್ಲ ಎಂದು ಹೇಳಿದರು.
ಈ ವೇಳೆ ಪ್ರಾಂಶುಪಾಲೆ ಕಲಾವತಿ ವಿದ್ಯಾರ್ಥಿನಿಯರಲ್ಲಿ ಹಿಜಾಬ್ ಕಳಚಿ ತರಗತಿಗೆ ಹೋಗಬೇಕಾಗಿ ಆದೇಶವಿದೆ ಎಂದು ನ್ಯಾಯಾಲಯದ ಆದೇಶ ಪತ್ರ ತೋರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು ಕೋರ್ಟ್ ಆದೇಶ ಬರುವವರೆಗೂ ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಲೇ ಬೇಕು, ನಮಗೆ ತರಗತಿಯಲ್ಲೇ ಪಾಠ ಹೇಳಿ ಎಂದು ಪಟ್ಟು ಹಿಡಿದರು.
ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಸಾಲಿಯಾನ್ ಕಾಲೇಜಿಗೆ ಭೇಟಿ ನೀಡಿ, ಪ್ರಾಂಶುಪಾಲರಲ್ಲಿ ಚರ್ಚಿಸಿದರು. ಪಿ.ಯು. ತರಗತಿ ಆರಂಭಿಸಲು ಕೋರ್ಟ್ ಮತ್ತು ಸರಕಾರದ ಆದೇಶವನ್ನೇ ಪಾಲಿಸಬೇಕಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗದೆ ಮತ್ತು ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದೆಂಬ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಆನ್ ಲೈನ್ ತರಗತಿ ನಡೆಸಲು ನಿರ್ಧರಿಸಲಾಗಿದೆ ಎಂದು ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಸಾಲ್ಯಾನ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ತಹಶೀಲ್ದಾರ್ ಗುರುಪ್ರಸಾದ್, ಗ್ರಾಮಕರಣಿಕ ಪ್ರಮೋದ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post