ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲದ ಕಿಂಗ್‌ಪಿನ್ ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಡೆವೊಲೆ ಅಡೆಟುಟು ಆನು ಆಲಿಯಾಸ್ ರೆಜನಾ ಜರಾ ಆಲಿಯಾಸ್ ಆಯಿಶಾ(33) ಬಂಧಿತ ಮಹಿಳೆ. ಈಕೆಯ ವಶದಿಂದ 20 ಲ.ರೂ. ಮೌಲ್ಯದ 400 ಗ್ರಾಂ ತೂಕದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದೆ.
ಡ್ರಗ್ ದಂಧೆಯ ಕಿಂಗ್ ಪಿನ್ ಯಾರಿದ್ದಾರೆಂದು ಪತ್ತೆ ಮಾಡಲು ಮಂಗಳೂರು ಸಿಸಿಬಿ ಪೊಲೀಸರು ಕಳೆದ ಮೂರು ತಿಂಗಳಿನಿಂದ ತನಿಖೆ ಕೈಗೊಂಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಬಂಧಿತರಾಗಿರುವ ಹೆಚ್ಚಿನ ಆರೋಪಿಗಳಿಗೆ ನೈಜಿರಿಯಾ ಮೂಲದವರಿಂದಲೇ ಡ್ರಗ್ಸ್ ಪೂರೈಕೆ ಆಗುತ್ತಿರುವುದು ತಿಳಿದುಬಂದಿತ್ತು. ನಿರಂತರ ಕಾರ್ಯಾಚರಣೆ ಬಳಿಕ ನೈಜೀರಿಯಾ ಮೂಲದ ಮಹಿಳೆಯೊಬ್ಬಳು ತನ್ನ ನಿಜ ವಿಚಾರ ಮುಚ್ಚಿಟ್ಟು ಬೆಂಗಳೂರಿನ ಯಲಹಂಕದಲ್ಲಿ ವಾಸ್ತವ್ಯ ಇರುವುದು ಪತ್ತೆಯಾಗಿತ್ತು.
ಈಕೆ ಮೂಲತಃ ನೈಜೀರಿಯಾ ದೇಶದ ಒಂಡೋ ರಾಜ್ಯದ ಅಕುರೆ ನಗರದ ನಿವಾಸಿಯಾಗಿದ್ದು ಪ್ರಸಕ್ತ ಯಲಹಂಕ ಹೋಬಳಿಯ ಜಕ್ಕೂರಿನ ಜಿಪಿ ನಾರ್ತ್ ಅವೆನ್ಯೂ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದಳು. ಆರೋಪಿ ವಶದಿಂದ ಒಟ್ಟು 400 ಗ್ರಾಂ ತೂಕದ ರೂ. 20 ಲಕ್ಷ ಮೌಲ್ಯದ ಎಂಡಿಎಂಎ ಮಾದಕ ವಸ್ತು, ಐಫೋನ್-1, ನಗದು ರೂ. 2910 ವಶಪಡಿಸಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ ರೂ 20,52,910 ಆಗಬಹುದೆಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾಭ್ಯಾಸಕ್ಕಾಗಿ ಬಂದಿದ್ದಳು : ಈಕೆ ವ್ಯಾಸಂಗ ವೀಸಾದಡಿಯಲ್ಲಿ ಭಾರತಕ್ಕೆ ಬಂದು ವಿದ್ಯಾಭ್ಯಾಸ ಮಾಡಿಕೊಂಡು ಅನಂತರ ಇಲ್ಲಿ ಸ್ವಲ್ಪ ಸಮಯ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದಳು. ಬಳಿಕ ನರ್ಸಿಂಗ್ ಕೆಲಸ ಬಿಟ್ಟು ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದಳು. ಉಳ್ಳಾಲ, ಸೆನ್ ಪೊಲೀಸ್ ಠಾಣೆ, ಮಂಗಳೂರು ಉತ್ತರ, ಕಂಕನಾಡಿ ನಗರ, ಕೊಣಾಜೆ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 7 ಡ್ರಗ್ಸ್ ಪ್ರಕರಣದ ಆರೋಪಿಗಳು ಈಕೆಯಿಂದಲೇ ಡ್ರಗ್ಸ್ ಖರೀದಿಸಿದ್ದರು. ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ, ಪಿಎಸ್‌ಐಯವರಾದ ರಾಜೇಂದ್ರ ಬಿ, ಶರಣಪ್ಪ ಭಂಡಾರಿ, ಸುದೀಪ್ ಎಂ ವಿ, ನರೇಂದ್ರ ಹಾಗೂ ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post