ಬೆಳ್ತಂಗಡಿ, ಅ.2 : ಎಲೆಕ್ಟ್ರಾನಿಕ್ಸ್ ವಸ್ತು ವಿದೇಶಕ್ಕೆ ಸರಬರಜು ಮಾಡುವ ಕೆಲಸ ಎಂದು ಮಗನನ್ನು ನಂಬಿಸಿ ಮಲೇಷ್ಯಾಕ್ಕೆ ಕಳುಹಿಸಿ ಅಲ್ಲಿ ಆತ ಜೈಲು ಪಾಲಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಅಮಿತ್ ತಾಯಿ ಮೀನಾಕ್ಷಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆ.1 ರಂದು ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕಾರಿಂಜ ಮನೆ ನಿವಾಸಿ ಕಾಂತಪ್ಪ ಪೂಜಾರಿ ಅವರ ಪತ್ನಿ ಮೀನಾಕ್ಷಿ ಎಂಬವರು ದೂರು ನೀಡಿದ ಮಹಿಳೆ. ಇವರ ಮಗ ಅಮಿತ್ ಕಾರಂಜಿ ಎಂಬಾತ ಎಂಟು ವರ್ಷಗಳ ಹಿಂದೆ ಮಲೇಷ್ಯಾಕ್ಕೆ ತೆರಳಿದವ ಅಲ್ಲಿ ಜೈಲು ಪಾಲಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪುತ್ತೂರಿನವರಾದ ಪ್ರದೀಪ್ ರೈ ಪಾಂಬಾರು ಬೆಳ್ಳಾರೆ ಮತ್ತು ಪ್ರಖ್ಯಾತ ರೈ ರವರು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಿತ್ ಗೆ ಮೋಸ ಮಾಡಿದ್ದಾರೆ ಎಂದು ಮೀನಾಕ್ಷಿಯವರು ಆರೋಪಿಸಿದ್ದಾರೆ. ಆರೋಪಿಗಳ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಐಪಿಸಿ ಕಲಂ:506 ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ ಆರೋಪಿಗಳಾದ ಪ್ರದೀಪ್ ರೈ ಹಾಗೂ ಪ್ರಖ್ಯಾತ್ ರೈ ಅವರು ಮಲೇಷ್ಯಾಕ್ಕೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯುವ ಕರ್ತವ್ಯಕ್ಕೆ ಅಮೀತನನ್ನು ನಿಯೋಜಿಸಿದ್ದರು. 2013ರ ಮಾರ್ಚ್ 2ರಂದು ಆತನ ಬಳಿ ಎಲೆಕ್ಟ್ರಾನಿಕ್ ವಸ್ತು ಎಂದು ಹೇಳಿ ಮಾದಕ ದ್ರವ್ಯವನ್ನು ಪ್ಯಾಕ್ ಮಾಡಿ ಆತನಿಗೆ ಗೊತ್ತಾಗದಂತೆ ನೀಡಿದ್ದು, ಇದರ ಅರಿವಿಲ್ಲದ ಆತ ಮಲೇಷ್ಯಾಕ್ಕೆ ಅದನ್ನು ತೆಗೆದುಕೊಂಡು ಹೋಗಿದ್ದಾನೆ. ಅಮೀತ್ ಮಲೇಷ್ಯಾ ತಲುಪುತ್ತಿದ್ದಂತೆ ಪೊಲೀಸರು ಆತನ ಕೈಯಲ್ಲಿದ್ದ ವಸ್ತುಗಳನ್ನು ತಪಾಸಣೆ ನಡೆಸಿದ್ದು ಆ ವೇಳೆ ಮಾದಕ ದ್ರವ್ಯ ಪತ್ತೆಯಾದ ಹಿನ್ನಲೆಯಲ್ಲಿ ಆತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವಿಷಯವನ್ನು ಮೀನಾಕ್ಷಿಯವರು ಪ್ರದೀಫ್ ರೈ ಪಾಂಬಾರು ಮತ್ತು ಪ್ರಖ್ಯಾತ್ ರೈ ಎಂಬವರಿಗೆ ತಿಳಿಸಿದಾಗ ನಿಮ್ಮ ಮಗನನ್ನು ಬಿಟ್ಟು ಕೊಡಿಸುತ್ತೇವೆ. ಆದರೇ ಈ ಬಗ್ಗೆ ಯಾರಲ್ಲಿಯೂ ಬಾಯ್ಬಿಡಬಾರದಾಗಿ ತಾಕೀತು ಮಾಡಿದ್ದರು. ಹಾಗಾಗಿ ಅಸಹಾಯಕರಾಗಿ ದೂರು ನೀಡಿರಲಿಲ್ಲ. ಆದರೆ ಇತ್ತೀಚೆಗೆ ಅಲ್ಲಿನ ನ್ಯಾಯಾಲಯ ಮಗನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆ ಬಳಿಕ ಮತ್ತೆ ಪ್ರಕರಣವನ್ನು ಯಾರಿಗಾದರೂ ತಿಳಿಸಿದರೆ ಮಗ ಹಾಗೂ ನಿಮ್ಮ ಜೀವ ಉಳಿಯದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಹಾಗೂ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆ ಮರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.