ಮಂಗಳೂರು: ವಿಶ್ವವಿಖ್ಯಾತ ‘ಮಂಗಳೂರು ದಸರಾ’ಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಸಜ್ಜಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೋವಿಡ್ ಮಾರ್ಗಸೂಚಿಗಳೊಂದಿಗೆ ಅ.7ರಿಂದ ಅ.16ರ ವರೆಗೆ ವೈಭವಪೂರ್ಣವಾಗಿ ನವರಾತ್ರಿ ಉತ್ಸವಕ್ಕೆ ಸಿದ್ಧತೆ ನಡೆಸಲಾಗಿದೆ.
‘ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ‘ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಯಲಿವೆ. ದಸರಾ ಮೆರವಣಿಗೆ ಹೊರತುಪಡಿಸಿ ಉಳಿದೆಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದೆ’ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
‘ಅ.7ರಂದು ಮಹಾನವಮಿ ಉತ್ಸವ ಆರಂಭದೊಂದಿಗೆ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆಗೆ ಗುರುಪ್ರಾರ್ಥನೆ, 11.30ಕ್ಕೆ ಕಲಶ ಪ್ರತಿಷ್ಠೆ ಹಾಗೂ 11.40ಕ್ಕೆ ದರ್ಬಾರು ಮಂಟಪದಲ್ಲಿ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ನಿತ್ಯ ವಿಶೇಷ ಪೂಜೆಗಳು ನೆರವೇರಲಿದೆ. ಅ. 15ರಂದು ಮಹಾಪೂಜೆ ನಡೆದು ರಾತ್ರಿ 8ರಿಂದ ಕ್ಷೇತ್ರದ ಆವರಣದಲ್ಲಿ ಸರಳ ಮೆರವಣಿಗೆಯೊಂದಿಗೆ ಶಾರದಾ ವಿಸರ್ಜನೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಸರ್ಕಾರದ ಆದೇಶದಂತೆ ಈ ಬಾರಿಯೂ ದಸರಾವನ್ನು ಕೋವಿಡ್ ಮಾರ್ಗಸೂಚಿಗಳೊಂದಿಗೆ ನಡೆಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆಯ ಬದಲು ಆಹಾರ ಪೊಟ್ಟಣವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುವುದು’ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ: ‘ದಸರಾ ಪ್ರಯುಕ್ತ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 10ರಿಂದ 20 ಕಲಾ ತಂಡಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿವೆ. ಕೋವಿಡ್ ಕಾರಣದಿಂದ ಇದನ್ನೂ ವರ್ಚುವಲ್ ಮೂಲಕ ನಡೆಸಲು ಉದ್ದೇಶಿಸಿದ್ದು, ಸ್ಥಳೀಯ ವಾಹಿನಿಯ ಮೂಲಕ ವೀಕ್ಷಿಸಬಹುದು’ ಎಂದು ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು.
ವಿದ್ಯುದ್ದೀಪಾಲಂಕಾರ: ‘ಮಂಗಳೂರು ದಸರಾ’ ಮಹೋತ್ಸವದ ಅಂಗವಾಗಿ ನಗರದ ಸುಮಾರು 5–7 ಕಿ.ಮೀ. ರಾಜಬೀದಿಯಲ್ಲಿ ವಿದ್ಯುದ್ದೀಪಾಲಂಕಾರಕ್ಕೆ ಮಂಗಳೂರು ಮಹಾನಗರ ಪಾಲಿಕೆಯಿಂದ ವ್ಯವಸ್ಥೆಗೆ ಪಾಲಿಕೆ ಸಮ್ಮತಿಸಿರುವುದು ಹಾಗೂ ಇದಕ್ಕೆ ಸಹಕರಿಸಿರುವ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯ ಹರಿಕೃಷ್ಣ ಬಂಟ್ವಾಳ ತಿಳಿಸಿದರು.
‘ಕೋವಿಡ್ ಲಸಿಕೆಗೆ ವ್ಯವಸ್ಥೆ: ‘ದಸರಾ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೋವಿಡ್–19 ಲಸಿಕೆಯನ್ನು ವ್ಯವಸ್ಥೆಯನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ಮಾಡಲಾಗುತ್ತದೆ. 18 ವರ್ಷ ದಾಟಿದವರು ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆಯುವವರು ಆಧಾರ್ ಕಾರ್ಡ್ ತರುವುದು ಕಡ್ಡಾಯ. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆತನಕ ಲಸಿಕೆ ಲಭ್ಯವಿದೆ’ ಎಂದು ಪದ್ಮರಾಜ್ ಆರ್. ಮಾಹಿತಿ ನೀಡಿದರು.
Discover more from Coastal Times Kannada
Subscribe to get the latest posts sent to your email.
Discussion about this post