ಮುಂಬೈ ಫೆ 3: ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆಯ ನಗರ ಮುಖ್ಯಸ್ಥರ ಮೇಲೆ ಬಿಜೆಪಿ ಶಾಸಕರೊಬ್ಬರು ನಿನ್ನೆ ತಡ ರಾತ್ರಿ ಗುಂಡು ಹಾರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಮಹೇಶ್ ಗಾಯಕ್ವಾಡ್ ಮೇಲೆ ಗಣಪತ್ ಗಾಯಕ್ವಾಡ್ ಗುಂಡು ಹಾರಿಸಿದ್ದು, ಅವರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸಬಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಬೆಂಬಲಿಗರು ಶಿವಸೇನಾ (ಏಕನಾಥ್ ಶಿಂಧೆ)ಬಣದ ನಾಯಕ ಮಹೇಶ್ ಹಾಯಕ್ವಾಡ್ ಅವರ ಬೆಂಬಲಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮಹೇಶ್ ಹಾಯಕ್ವಾಡ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮುಂಬೈನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಕಲ್ಯಾಣ್ ಪೂರ್ವ ಕ್ಷೇತ್ರವನ್ನು ಗಣಪತ್ ಗಾಯಕ್ವಾಡ್ ಪ್ರತಿನಿಧಿಸುತ್ತಾರೆ. ಅವರ ಪಕ್ಷವು ಮಹಾರಾಷ್ಟ್ರ ಸರ್ಕಾರದಲ್ಲಿ ಶಿಂಧೆ ಅವರ ಸೇನೆಯೊಂದಿಗೆ ಮೈತ್ರಿ ಹೊಂದಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಉಭಯ ಕಡೆಯವರು ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ ಮಾತುಕತೆ ವಾಗ್ವಾದಕ್ಕೆ ತಿರುಗಿ ತಡ ರಾತ್ರಿ ಮಹೇಶ್ ಗಾಯಕ್ವಾಡ್ ಮೇಲೆ ಗುಂಡು ಹಾರಿಸಲಾಗಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಸೇನಾ ನಾಯಕ ಮತ್ತು ಮತ್ತೊಬ್ಬ ಬೆಂಬಲಿಗರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಹೇಶ್ ಗಾಯಕ್ವಾಡ್ ಅವರ ದೇಹದಿಂದ ಐದು ಗುಂಡುಗಳನ್ನು ಹೊರತೆಗೆಯಲಾಗಿದೆ. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಘಟನೆಯ ನಂತರ ಬಂಧಿತರಾಗಿರುವ ಗಣಪತ್ ಗಾಯಕ್ವಾಡ್ ಅವರು ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿ, ‘ಮಹೇಶ್ ಗಾಯಕ್ವಾಡ್ ಅವರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾದ ಜಮೀನಿಗೆ ಸಂಬಂಧಿಸಿದಂತೆ ಸಮಸ್ಯೆಯಾಗಿದೆ. ಅವರು ತಮ್ಮ ಮಗನೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆ’ ಎಂದು ಹೇಳಿದ್ದಾರೆ.
“ಮಹೇಶ್ ಗಾಯಕ್ವಾಡ್ ಮತ್ತು ಗಣಪತ್ ಗಾಯಕ್ವಾಡ್ ಅವರ ನಡುವೆ ಸಾಕಷ್ಟು ವಿವಾದಗಳಿವೆ. ಹೀಗಾಗಿ ಅವರು ದೂರು ನೀಡಲು ಹಿಲ್ ಲೈನ್ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಗಣಪತ್ ಗಾಯಕ್ವಾರ್ಡ್ ಮಾತುಕತೆಯ ಸಮಯದಲ್ಲಿ ಮಹೇಶ್ ಗಾಯಕ್ವಾಡ್ ಮತ್ತು ಅವರ ಸಹಚರರ ಮೇಲೆ ಗುಂಡು ಹಾರಿಸಿದರು. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ,” ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುಧಾಕರ ಪಠಾರೆ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post