ಮುಂಬೈ, ಫೆ.3: ಬಾಲಿವುಡ್ ನಟಿ ಪೂನಂ ಪಾಂಡೆ ವಿಧಿವಶರಾಗಿದ್ದಾರೆ ಎನ್ನುವ ಸುದ್ದಿ ಎಲ್ಲಡೆ ಹಬ್ಬಿತ್ತು. ಗರ್ಭಕಂಠ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪೂನಂ 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿತ್ತು. ಆದರೆ ಇದೀಗ ಪೂನಂ ಪಾಂಡೆ ಬದುಕಿದ್ದಾರೆ ಎನ್ನುವ ಸ್ಪಷ್ಟನೆ ಸಿಕ್ಕಿದ್ದು, ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ಬೆಳಗ್ಗೆ ವಿಡಿಯೋ ಹೇಳಿಕೆ ಮೂಲಕ ಪೂನಂ ಪಾಂಡೆ ಸಾವಿನ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. “ನಿಮ್ಮೆಲ್ಲರೊಂದಿಗೆ ಮಹತ್ವದ ವಿಷಯವನ್ನು ಹಂಚಿಕೊಳ್ಳಲು ನಾನು ಬಯಸುತ್ತಿದ್ದೇನೆ. “ನಾನು ಜೀವಂತವಾಗಿದ್ದೇನೆ. ನಾನು ಗರ್ಭಕಂಠದ ಕ್ಯಾನ್ಸರ್ನಿಂದ ಸಾಯಲಿಲ್ಲ. ದುರದೃಷ್ಟವಶಾತ್, ಗರ್ಭಕಂಠದ ಕ್ಯಾನ್ಸರ್ನಿಂದ ಪ್ರಾಣ ಕಳೆದುಕೊಂಡ ನೂರಾರು ಮತ್ತು ಸಾವಿರಾರು ಮಹಿಳೆಯರ ಬಗ್ಗೆ ನಾನು ಹೇಳಲಾರೆ.” ಎಂದು ತಮ್ಮ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಮಾಡೆಲ್ ಹಾಗೂ ನಟಿಯಾಗಿದ್ದ ಪೂನಂ ಪಾಂಡೆ ಸದಾ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದರು. ಇದೀಗ ಸಾವಿನ ವಿಚಾರದಲ್ಲೂ ವಿವಾದ ಎದಿದ್ದು, ಪೂನಂ ಪಾಂಡೆ ಸ್ಪಷ್ಟನೆ ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೊಂದು ಕೆಟ್ಟ ಪ್ರಚಾರ, ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆ ಸರಿಯಲ್ಲ, ಕೆಲವು ಅಭಿಮಾನಿಗಳು ಸೂಕ್ಷ್ಮವಾಗಿರುತ್ತಾರೆ. ನಿಮ್ಮ ಪ್ರಚಾರಕ್ಕೆ ಜನರ ಭಾವನೆ ಬಳಸಿಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ.
![](https://coastaltimeskannada.com/wp-content/uploads/2024/02/MCC-Bank-Ad-English-31.1.24.jpg)
Discussion about this post