ಮುಂಬೈ: ಉದ್ಯಮಿ ರಾಜ್ ಕುಂದ್ರಾ ಅವರು ಪ್ರಮುಖ ಆರೋಪಿಯಾಗಿರುವ ನೀಲಿ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಗೆಹನಾ ವಸಿಷ್ಠ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ಮುಂಬೈ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ.
ಬಂಧನ ಭೀತಿಯಿಂದ ನಟಿ ಗೆಹನಾ ಅವರು ನಿರೀಕ್ಷಣಾ ಜಾಮೀನು ಕೋರಿ ಹೆಚ್ಚುವರಿ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಸೋನಾಲಿ ಅಗರ್ವಾಲ್ ಅವರು, ನಟಿಯ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದಿದ್ದಾರೆ.
ನ್ಯಾಯಾಲಯವು ನಟಿ ಜಾಮೀನು ಅರ್ಜಿಯ ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿದೆ. ಆದಾಗ್ಯೂ, ಗೆಹನಾಗೆ ಅಲ್ಲಿಯವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ಕೋರ್ಟ್ ನಿರಾಕರಿಸಿದೆ.
“ಪ್ರಸ್ತುತ ಎಫ್‌ಐಆರ್‌ನಲ್ಲಿನ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಆರೋಪಿಗಳು ಇತರ ಸಂತ್ರಸ್ಥರನ್ನು ಚುಂಬಿಸುವ ದೃಶ್ಯಗಳು ಮತ್ತು ಲೈಂಗಿಕ ದೃಶ್ಯಗಳನ್ನು ಮಾಡುವಂತೆ ಒತ್ತಾಯಿಸಿದ್ದಾರೆ. ಅಂತಹ ಆರೋಪಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿ, ಮಧ್ಯಂತರ ರಕ್ಷಣೆ ನೀಡಲು ಇದು ಸೂಕ್ತ ಪ್ರಕರಣ ಎಂದು ನನಗೆ ಅನಿಸುವುದಿಲ್ಲ” ಎಂದು ಸೋನಾಲಿ ಅಗರ್ವಾಲ್ ಅವರು ಹೇಳಿದ್ದಾರೆ.