ಕಾಸರಗೋಡು : ಗುಂಡು ಹಾರಾಟ ಹಾಗೂ ಯುವಕನ ಕೊಲೆ ಯತ್ನ ಸೇರಿದಂತೆ ಎರಡು ಪ್ರತ್ಯೇಕ ಪ್ರಕರಣದ ಇಬ್ಬರು ಆರೋಪಿಗಳನ್ನು ಕಾಸರಗೋಡು ಡಿವೈಎಸ್ಪಿಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಬಂಧಿತರನ್ನು ಮಿತ್ತನಡ್ಕದ ನವಾಫ್ ( 33) ಮತ್ತು ಉಪ್ಪಳದ ಮುಜಾ ಹಿದ್ದೀನ್ ( 30) ಎಂದು ಗುರುತಿಸಲಾಗಿದೆ.
ಏಳು ತಿಂಗಳ ಹಿಂದೆ ಉಪ್ಪಳ ಹಿದಾಯತ್ ನಗರದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ನವಾಫ್ ನನ್ನು ಬಂಧಿಸಲಾಗಿದೆ. ನವಾಫ್ ನೇತೃತ್ವದ ತಂಡವು ರಿವಾಲ್ವರ್ ಹಾಗೂ ಮಾರಕಾಸ್ತ್ರ ತೋರಿಸಿ ಬೆದರಿಸಿ ದಾಂದಲೆ ನಡೆಸಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ತಲಪಿದ್ದ ಮಂಜೇಶ್ವರ ಠಾಣಾ ಪೊಲೀಸರನ್ನು ಕಂಡು ಪರಾರಿಯಾಗಿದ್ದ ತಂಡವು ಮೀಯಪದವು ಎಂಬಲ್ಲಿ ಗುಂಡು ಹಾರಿಸಿ, ಬಿಯರ್ ಬಾಟ್ಲಿ ಎಸೆದು ತಂಡವು ಕರ್ನಾಟಕಕ್ಕೆ ಪರಾರಿಯಾಗಿತ್ತು. ಇದೇ ತಂಡ ವಿಟ್ಲ ಪೊಲೀಸರ ಮೇಲೆಯೂ ದಾಳಿ ನಡೆಸಿದ್ದು, ಈ ಪ್ರಕರಣದಲ್ಲಿ ನವಾಫ್ ಶಾಮೀಲಾಗಿದ್ದನು.
ನವಾಫ್ ಮಾದಕ ಸಾಗಾಟ ಪ್ರಕರಣದಲ್ಲೂ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನೊಂದು ಪ್ರಕರಣದಕ್ಕೆ ಸಂಬಂಧಪಟ್ಟಂತೆ ಮುಜಾಹಿದ್ದೀನ್ ಎಂಬಾತನನ್ನು ಬಂಧಿಸಲಾಗಿದ್ದು, ಎರಡು ವರ್ಷಗಳ ಹಿಂದೆ ಕುಬಣೂರಿನಲ್ಲಿ ಹುಸೈನಾರ್ ಎಂಬವರನ್ನು ತಡೆದು ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈತ ಹಾಗೂ ಇತರ ಮೂವರು ಸೇರಿ ಕೊಲೆಗೆ ಯತ್ನಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಈ ಹಿಂದೆ ಬಂಧಿಸಲಾಗಿತ್ತು.
Discussion about this post