ಉಳ್ಳಾಲ: ಕರೊನಾ ಸಂಕಷ್ಟ ಸಂದರ್ಭದಲ್ಲೇ ಖಾಸಗಿ ಬಸ್ ಪ್ರಯಾಣ ದರ ಹೆಚ್ಚಿಸಲಾಗಿದೆ. ಒಂದು ನಿರ್ದಿಷ್ಟ ಜಾಗಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ ಟಿಕೆಟ್ ದರದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದ್ದು ಜನಸಾಮಾನ್ಯರಿಗೆ ಸರ್ಕಾರಿ ಬಸ್ ಪ್ರಯಾಣವೇ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡುತ್ತಿದೆ.
ಈ ಹಿಂದೆ ಖಾಸಗಿ ಬಸ್ ದರ ಏರಿಸುವ ಮೊದಲು ಸಂಘ-ಸಂಸ್ಥೆಗಳ, ಜನಪ್ರತಿನಿಧಿಗಳ ಸಭೆ ನಡೆಸಲಾಗುತ್ತಿತ್ತು. ಅಲ್ಲಿ ದರ ಏರಿಕೆಗೆ ಒಪ್ಪಿಗೆ ಸಿಗುತ್ತಿರಲಿಲ್ಲ. ಆದರೂ ಟಿಕೆಟ್ ಮತ್ತು ಪ್ರಯಾಣದ ದೂರ ಆಧಾರದಲ್ಲಿ ಶೇ.10, 15ರಷ್ಟು ಮಾತ್ರ ಹೆಚ್ಚಳವಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಹಾಗಾಗಿಲ್ಲ. ಲಾಕ್‌ಡೌನ್ ನೆಪವನ್ನೇ ಮುಂದಿಟ್ಟು ಪ್ರಯಾಣ ದರ ಏರಿಸಲಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಶೇ.50ನ್ನೂ ಮೀರಿದೆ. ಲಾಕ್‌ಡೌನ್ ಮುಗಿಸಿ ಕೆಲಸಕ್ಕೆ ತೆರಳಿದ ಕಾರ್ಮಿಕರು ಬಸ್ ಹತ್ತಿದಾಗಲೇ ಶಾಕ್ ನೀಡಿದ್ದು ಟಿಕೆಟ್ ದರ. ಕನಿಷ್ಠ ಎಂಟು ರೂಪಾಯಿಯಿದ್ದ ದರ 12ಕ್ಕೇರಿತ್ತು. ಉದಾಹರಣೆಗೆ ಮುಡಿಪುವಿನಿಂದ ಮಂಗಳೂರಿಗೆ ಖಾಸಗಿ ಬಸ್ ಕಂಡೆಕ್ಟರ್ 33 ರೂ. ಟಿಕೆಟ್ ಕೊಡುತ್ತಿದ್ದರೆ, ಅದೇ ಪ್ರಯಾಣಿಕ್ಕೆ ಸರ್ಕಾರಿ ಬಸ್‌ನಲ್ಲಿ 19 ರೂ. ತೊಕ್ಕೊಟ್ಟಿನಿಂದ ಮಂಗಳೂರಿಗೆ ಕೆಎಸ್‌ಆರ್‌ಟಿಸಿಯಲ್ಲಿ 11 ರೂ, ಖಾಸಗಿಯಲ್ಲಿ 18. ಯಾವುದೇ ಪ್ರದೇಶಕ್ಕೂ ಖಾಸಗಿ ಮತ್ತು ಸರ್ಕಾರಿ ಬಸ್ ನಡುವೆ ಶೇ.60-70ರಷ್ಟು ವ್ಯತ್ಯಾಸವಿದೆ.
ಕರೊನಾ ಸಂದರ್ಭದಲ್ಲೇ ನಾಟೆಕಲ್‌ನಿಂದ ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರ್ಕಾರಿ ಬಸ್ ಬಂದಿದೆ. ಇದರಿಂದ ಮಂಜನಾಡಿ, ತೌಡುಗೋಳಿ ಕ್ರಾಸ್, ಹೂಹಾಕುವಕಲ್ಲು ಇತ್ಯಾದಿ ಊರಿನವರಿಗೂ ಪ್ರಯೋಜನವಾಗಿದೆ. ಇಲ್ಲಿಗೆ ಸರ್ಕಾರಿ ಬಸ್ ಬೇಕೆನ್ನುವ ಹೋರಾಟ 2012ರಲ್ಲೇ ಆರಂಭವಾಗಿದ್ದು, ಖಾಸಗಿ ಬಸ್ ಮಾಲೀಕರು ನ್ಯಾಯಾಲಯದಿಂದ ತಡೆ ತಂದಿದ್ದರು. ಈಗ ಮೊಂಟೆಪದವು ಭಾಗದ ಜನರೂ ಸರ್ಕಾರಿ ಬಸ್ ನೋಡಿದ್ದಾರೆ. ಪಾವೂರು ಗ್ರಾಮಕ್ಕೂ ಸರ್ಕಾರಿ ಬಸ್ ಬೇಕೆನ್ನುವ ಬೇಡಿಕೆಗೆ ಬಲ ಬಂದಿದೆ.
Discussion about this post