ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ ಆರೋಪಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಪುತ್ತೂರು ಕಬಕದ ನಿವಾಸಿ ನಿತೇಶ್(30) ಶಿಕ್ಷೆಗೊಳಗಾದವನು. ಈತನ ಜತೆಗೆ ಈತನ ತಂದೆ ರಾಮಣ್ಣ ಪೂಜಾರಿ(63) ಮತ್ತು ಬಾವ ನಿಖಿತಾಶ್ ಸುವರ್ಣ(40)ನಿಗೆ 5 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿದೆ.
ಪ್ರಕರಣದ ವಿವರ
ನಿತೇಶ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಸುತ್ತಾಡಿಸಿದ್ದ. ಬಳಿಕ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅಲ್ಲದೆ ಆಕೆಯ ಮನೆಗೂ ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಯುವತಿ ಮದುವೆಯಾಗಲು ಕೇಳಿಕೊಂಡಾಗ ನಿರಾಕರಿಸಿದ್ದ. ಪರಸ್ಪರ ಜಾತಿ ಬೇರೆಯಾಗಿರುವುದರಿಂದ ತಂದೆ ಮತ್ತು ಬಾವ ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿದ್ದ. ನಿತೇಶ್‌ನ ತಂದೆ ಮತ್ತು ಬಾವನ ಬಳಿ ಯುವತಿ ಕೇಳಿಕೊಂಡಾಗ ಅವರು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಯುವತಿ 2019ರಲ್ಲಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಳು. ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯಕ್ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ ಅವರು ಆರೋಪಿಯ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಆ.30ರಂದು ಆರೋಪಿ ನಿತೇಶ್‌ಗೆ ಭಾರತೀಯ ದಂಡಸಂಹಿತೆಯ ಕಲಂ 376 (2) (ಎನ್) ಅಡಿಯಲ್ಲಿ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ, ಕಲಂ 417ರ ಅಡಿಯಲ್ಲಿ 1 ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ರಾಮಣ್ಣ ಪೂಜಾರಿ ಮತ್ತು ನಿಖಿತಾಶ್‌ಗೆ ಭಾರತೀಯ ದಂಡ ಸಂಹಿತೆಯ ಕಲಂ 504 ರಡಿ 1ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ ಹಾಗೂ ಕಲಂ 506ರಡಿ 5 ವರ್ಷ ಕಠಿನ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಅಲ್ಲದೆ ನೊಂದ ಯುವತಿಗೆ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಕೆಲವು ಸಾಕ್ಷಿಗಳ ವಿಚಾರಣೆಯನ್ನು ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ಅವರು ನಡೆಸಿದ್ದರು. ಅನಂತರ ಸರಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಅವರು ಉಳಿದ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಒಟ್ಟು 16 ಮಂದಿ ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. 88 ದಾಖಲೆಗಳನ್ನು ಗುರುತಿಸಲಾಗಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post