ಬೆಂಗಳೂರು: ಕನ್ನಡ ಚಿತ್ರರಂಗದ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಕೊನೆಗೂ ಕಾನೂನಾತ್ಮಕವಾಗಿ ತೆರೆಬಿದ್ದಿದೆ. ಹಲವು ವರ್ಷಗಳಿಂದ ಕೋರ್ಟ್ ಅಂಗಳದಲ್ಲಿದ್ದ ಈ ವಿಚ್ಛೇದನ ಪ್ರಕರಣವನ್ನು ಇತ್ಯರ್ಥಪಡಿಸಿರುವ ಕರ್ನಾಟಕ ಹೈಕೋರ್ಟ್, ದಂಪತಿಗೆ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ವಿಜಯ್ ಹಾಗೂ ನಾಗರತ್ನ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ. ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ, ಈ ಮೂವರು ಮಕ್ಕಳ ಪೋಷಣೆ, ವಿದ್ಯಾಭ್ಯಾಸ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ನಟ ದುನಿಯಾ ವಿಜಯ್ ಅವರೇ ನೋಡಿಕೊಳ್ಳಬೇಕು.
ದುನಿಯಾ ವಿಜಯ್ ಹಾಗೂ ನಾಗರತ್ನ 1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂಸಾರದಲ್ಲಿ ಮನಸ್ತಾಪಗಳು ಉಂಟಾಗಿ, ವಿಜಯ್ ಅವರು 2013ರಲ್ಲಿ ಮೊದಲ ಬಾರಿಗೆ ವಿಚ್ಛೇದನ ಕೋರಿ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಆದರೆ, 2014ರಲ್ಲಿ ದಂಪತಿ ಸಂಧಾನದ ಹಾದಿ ತುಳಿದು, ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದರು. ಆ ಬಳಿಕ 2018ರಲ್ಲಿ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ವಿಜಯ್ ಮತ್ತೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.
ಈ ಕಾನೂನು ಹೋರಾಟಕ್ಕೆ 2024ರಲ್ಲಿ ದೊಡ್ಡ ತಿರುವು ಸಿಕ್ಕಿತ್ತು. ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯವು ನಾಗರತ್ನ ವಿರುದ್ಧ ವಿಜಯ್ ಹೊರಿಸಿದ್ದ ಕ್ರೌರ್ಯದ ಆರೋಪಗಳು ಸಾಬೀತಾಗಿಲ್ಲ ಎಂದು ಹೇಳಿ, ವಿಚ್ಛೇದನದ ಅರ್ಜಿಯನ್ನು ವಜಾಗೊಳಿಸಿ ವಿಜಯ್‌ಗೆ ಬಿಗ್ ಶಾಕ್ ನೀಡಿತ್ತು. ಕೌಟುಂಬಿಕ ನ್ಯಾಯಾಲಯದ ಈ ತೀರ್ಪನ್ನು ಸವಾಲು ಮಾಡಿ ವಿಜಯ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅಂತಿಮವಾಗಿ 13 ವರ್ಷಗಳ ಬಳಿಕ ಹೈಕೋರ್ಟ್ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಕಾನೂನಾತ್ಮಕವಾಗಿ ಅಂತ್ಯ ವಿರಾಮವಿಟ್ಟಿದೆ.
ಈ ಕುರಿತು ದುನಿಯಾ ವಿಜಯ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸಮಸ್ತ ಅಭಿಮಾನಿಗಳಲ್ಲಿ ಹಾಗೂ ನನ್ನ ಬದುಕಿನುದ್ದಕ್ಕೂ ಜೊತೆಯಾಗಿ ನಿಂತ ಮಾಧ್ಯಮ ಮಿತ್ರರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

Discover more from Coastal Times Kannada
Subscribe to get the latest posts sent to your email.








Discussion about this post