ಮಂಗಳೂರು: ಬಜ್ಪೆ ಹಾಗೂ ಕಟೀಲು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಕರಂಬಾರು ಬಳಿಯ ರೇಗೋ ಪೆಟ್ರೋಲ್ ಪಂಪ್ ಸಮೀಪದಲ್ಲಿರುವ ಕಿರು ಸೇತುವೆಯ ಒಂದು ಪಾರ್ಶ್ವ ಬುಧವಾರ ಏಕಾಏಕಿ ಕುಸಿತವಾಗಿದೆ. ಪರಿಣಾಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರದಲ್ಲಿ ಗಂಭೀರ ವ್ಯತ್ಯಯ ಉಂಟಾಗಿದ್ದು, ಪೊಲೀಸರು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದು, ಈ ಬಗ್ಗೆ ಮಂಗಳೂರು ನಗರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಪ್ರಸಿದ್ಧ ಕ್ಷೇತ್ರ ಕಟೀಲನ್ನು ಬೆಸೆಯುವ ಮುಖ್ಯ ರಸ್ತೆಯ ಇದೇ ಕಿರು ಸೇತುವೆಯ ಕೆಳಭಾಗದ ಕಮಾನು ಕಲ್ಲುಗಳು ಜರಿದು ಬಿದ್ದಿದ್ದು, ಮೇಲ್ಭಾಗದ ಡಾಂಬರು ರಸ್ತೆಯಲ್ಲೂ ಬಿರುಕು ಮೂಡಿ ಕುಸಿತದ ಭೀತಿ ಎದುರಾಗಿದೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಬಜ್ಪೆ ಠಾಣಾ ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸೇತುವೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಹಾಗೂ ಮುನ್ನೆಚ್ಚರಿಕಾ ಪಟ್ಟಿಗಳನ್ನು ಅಳವಡಿಸಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ.

ಪರ್ಯಾಯ ಮಾರ್ಗಗಳ ಪ್ರಕಟಣೆ: ಸೇತುವೆ ಕುಸಿತದಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗದಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜ್ಪೆ ಪೊಲೀಸ್ ಠಾಣೆಯು ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದೆ.
ಮಂಗಳೂರು ಹಾಗೂ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವವರು: ಜರಿನಗರ ಅಥವಾ ಪೊರ್ಕೋಡಿ ರಸ್ತೆಯ ಮೂಲಕ ತೆರಳಬೇಕು. ಕಟೀಲು, ಬಜ್ಪೆ ಮತ್ತು ಕೈಕಂಬ ಕಡೆಗೆ ತೆರಳುವ ವಾಹನಗಳು: ಜರಿನಗರ ಅಥವಾ ಪೊರ್ಕೋಡಿ ರಸ್ತೆಯನ್ನು ಬಳಸಿಕೊಂಡು ಸಂಚರಿಸಬೇಕು. ಸಾರ್ವಜನಿಕರು ಹಾಗೂ ವಾಹನ ಸವಾರರು ಸುರಕ್ಷತೆಯ ದೃಷ್ಟಿಯಿಂದ ಈ ಮಾರ್ಗ ಬದಲಾವಣೆಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಕರಂಬಾರು ರೇಗೋ ಪೆಟ್ರೋಲ್ ಪಂಪ್ ಬಳಿಯ ಕಲ್ವರ್ಟ್ ಸಮಸ್ಯೆಯಿಂದ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ, ವಿಮಾನ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಲು ಹೆಚ್ಚುವರಿ ಸಮಯವನ್ನು ಮುಡಿಪಾಗಿಟ್ಟುಕೊಂಡು ಮುಂಚಿತವಾಗಿಯೇ ಪ್ರಯಾಣ ಯೋಜಿಸಬೇಕು. ಪೊಲೀಸ್ ಇಲಾಖೆ ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಅನುಸರಿಸಿ, ಸ್ಥಳೀಯ ಸಂಚಾರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಸಂಚರಿಸುವಂತೆ ವಿಮಾನ ನಿಲ್ದಾಣ ಆಡಳಿತ ಮಂಡಳಿ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.







Discussion about this post