ಮುಂಬೈ(ಅ.03): ದೇಶದ ವಾಣಿಜ್ಯ ನಗರಿ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯನ್ನು ಮಾದಕ ವಸ್ತು ನಿಯಂತ್ರಣ ದಳ (NCB) ಬಯಲು ಮಾಡಿದೆ.
ಈ ವೇಳೆ ಹಡಗಿನಲ್ಲಿದ್ದ ಕೊಕೇನ್, ಹಶೀಶ್ ಮತ್ತು ಎಂಡಿಎಂಎ ಸೇರಿದಂತೆ ಇನ್ನಿತರ ಅಕ್ರಮ ಮಾದಕ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈ ಪಾರ್ಟಿಯಲ್ಲಿ ತೊಡಗಿದ್ದ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ 10 ಮಂದಿ ಪೈಕಿ ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖಾನ್ ಪುತ್ರನೂ ಇದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶನಿವಾರ ದಾಳಿ ನಡೆಸಿದ ಎನ್‌ಸಿಬಿ ಅಧಿಕಾರಿಗಳು ಪ್ರಯಾಣಿಕರಂತೆ ಇದೇ ಹಡಗಿನಲ್ಲಿ ಮಸ್ತಿಯಲ್ಲಿದ್ದರು. ಮುಂಬೈ ಕರಾವಳಿಯನ್ನು ದಾಟಿದ ಹಡಗು ಸಮುದ್ರದ ಮಧ್ಯ ಭಾಗಕ್ಕೆ ಬರುತ್ತಿದ್ದಂತೆ ರೇವ್ ಪಾರ್ಟಿ ಆರಂಭವಾಗಿತ್ತು.
ಈ ವೇಳೆ ಬಂಧಿತರು ಯಾವುದೇ ಭೀತಿಯಿಲ್ಲದೆ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದರು. 7 ಗಂಟೆಗಳ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾದ ಆರೋಪಿಗಳನ್ನು ಭಾನುವಾರ ಮುಂಬೈಗೆ ವಾಪಸ್ ಕರೆತರಲಾಗುತ್ತದೆ ಎಂದು ಹೇಳಿದ್ದಾರೆ.