ಸುಬ್ರಹ್ಮಣ್ಯ/ದಕ್ಷಿಣ ಕನ್ನಡ: ಕಡಬ ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಯಾದ ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅನಿಲ ಸಮೀಪ ಶುಕ್ರವಾರ ಸಂಜೆ ಚಲಿಸುತ್ತಿದ್ದ ಕಾರಿಗೆ ಕಡವೆಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಯಂಚಿನಲ್ಲಿ ಮೃತಪಟ್ಟಿದ್ದ ಕಡವೆಯ ಕಳೇಬರವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದೆ.
ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯು ದಟ್ಟ ಅರಣ್ಯ ಪ್ರದೇಶದ ನಡುವೆ ಹಾದುಹೋಗುವುದರಿಂದ ಈ ಭಾಗದಲ್ಲಿ ವನ್ಯಜೀವಿಗಳ ಸಂಚಾರ ಸಾಮಾನ್ಯವಾಗಿದೆ. ಅನಿಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡವೆ, ಕಾಡುಹಂದಿ, ಕಾಡಾನೆ ಸೇರಿದಂತೆ ವಿವಿಧ ಕಾಡುಪ್ರಾಣಿಗಳು ರಸ್ತೆ ದಾಟುವ ಘಟನೆಗಳು ಆಗಾಗ್ಗೆ ನಡೆಯುತ್ತಿವೆ. ಈ ಹಿಂದೆ ಕೂಡ ಕಾಡುಪ್ರಾಣಿಗಳು ಹೆದ್ದಾರಿಗೆ ಅಡ್ಡಬಂದು ವಾಹನಗಳು ಅಪಘಾತಕ್ಕೀಡಾದ ಘಟನೆಗಳು ನಡೆದಿವೆ. ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಈ ರಸ್ತೆಯಲ್ಲಿ ಕತ್ತಲೆ ಮತ್ತು ಮಂಜು ಕವಿದ ವಾತಾವರಣ ಇರುವುದರಿಂದ ಚಾಲಕರಿಗೆ ರಸ್ತೆಗೆ ಏಕಾಏಕಿ ಬರುವ ವನ್ಯಜೀವಿಗಳು ಗೋಚರಿಸುವುದು ಕಷ್ಟವಾಗುತ್ತದೆ. ಹೀಗಾಗಿ ಅರಣ್ಯ ಪ್ರದೇಶದ ಮೂಲಕ ಸಂಚರಿಸುವ ವಾಹನ ಸವಾರರು ನಿಗದಿತ ವೇಗಮಿತಿಯನ್ನು ಪಾಲಿಸಿ, ರಸ್ತೆಯ ಎರಡೂ ಬದಿಗಳಲ್ಲಿ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಹಾಗೂ ಸ್ಥಳೀಯರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.
ಕಾಡುಪ್ರಾಣಿಗಳು ರಸ್ತೆ ದಾಟುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸುವುದು ಹಾಗೂ ಎಚ್ಚರಿಕೆಯಿಂದ ಸಂಚರಿಸುವುದರಿಂದ ಇಂತಹ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post