ಮಂಗಳೂರು, ಜ.4: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಿಂಗಾರಿ ಬೀಡಿ ಮಾಲೀಕ, ಬಂಟ್ವಾಳ, ಕಲ್ಲಡ್ಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸುಲೇಮಾನ್ ಹಾಜಿಯವರ ಬೋಳಂತೂರಿನ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಸುಮಾರು 30ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದೆ. ನಿನ್ನೆ ರಾತ್ರಿ 8 ಗಂಟೆಯಿಂದ 10.45ರ ನಡುವೆ ಘಟನೆ ನಡೆದಿದ್ದು, ಅಧಿಕಾರಿಗಳ ಸೋಗಿನಲ್ಲಿ ಬಂದು ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ.
ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ತಮಿಳುನಾಡು ನೋಂದಣಿಯ ಎರ್ಟಿಕಾ ಕಾರಿನಲ್ಲಿ ಏಳು ಮಂದಿಯ ತಂಡ ಬಂದಿದ್ದು, ಕುಟುಂಬಸ್ಥರೊಂದಿಗೆ ಮೊದಲಿಗೆ ಇಂಗ್ಲಿಷ್, ಹಿಂದಿಯಲ್ಲಿ ಮಾತನಾಡಿದ್ದಾರೆ. ಉದ್ಯಮಿ ಸುಲೇಮಾನ್ ತನಗೆ ಹಿಂದಿ, ಇಂಗ್ಲಿಷ್ ಬರಲ್ಲ ಎಂದು ಹೇಳಿದಾಗ, ಚಾಲಕನಾಗಿದ್ದ ವ್ಯಕ್ತಿ ಕನ್ನಡದಲ್ಲಿ ಮಾತನಾಡಿದ್ದು ಸಾಹೇಬ್ರೇ ಇವರು ಚೆನ್ನೈನಿಂದ ಇಡಿ ಅಧಿಕಾರಿಗಳು ಬಂದಿದ್ದಾರೆ, ನೀವು ತೆರಿಗೆ ಕಟ್ಟುತ್ತಿಲ್ಲ ಎಂದು ದೂರು ಬಂದಿದೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಸುಲೇಮಾನ್ ತಪಾಸಣೆಗೆ ಒಪ್ಪಿದ್ದು, ಅವರನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾರೆ.
ಕೂಡಲೇ ಅಧಿಕಾರಿಗಳ ಸೋಗಿನಲ್ಲಿದ್ದವರು ನಿಮ್ಮ ಮೊಬೈಲನ್ನು ಕೊಟ್ಟುಬಿಡಿ, ತಂದೆ, ಮಗನಲ್ಲಿ ಒಬ್ಬರನ್ನು ನಾವು ವಶಕ್ಕೆ ಪಡೆಯುತ್ತೇವೆ ಎಂದಿದ್ದಾರೆ. ಅಲ್ಲದೆ, ಮನೆಯನ್ನು ತಪಾಸಣೆ ನಡೆಸಿದ್ದು, ಕಪಾಟಿನಲ್ಲಿ ತುಂಬಿಟ್ಟಿದ್ದ ನಗದು ಹಣವನ್ನು ಮೂಟೆಕಟ್ಟಿ ಗೋಣಿಚೀಲದಲ್ಲಿ ತುಂಬಿಸಿದ್ದಾರೆ. ಎರಡು ಗಂಟೆ ಕಾಲ ಅಂದರೆ, ರಾತ್ರಿ 10.45ರ ವರೆಗೆ ಮನೆಯಲ್ಲಿ ತಡಕಾಡಿದ್ದು, ಇವರ ಸಹಿ ಎಲ್ಲ ಪಡೆದಿದ್ದಾರೆ. ನಿಮ್ಮಲ್ಲಿ ಒಬ್ಬರು ನಮ್ಮ ಜೊತೆಗೆ ಬನ್ನಿ, ನಾವು ಬಿಸಿ ರೋಡ್ ನಲ್ಲಿ ಲಾಡ್ಜ್ ನಲ್ಲಿದ್ದೇವೆ ಎಂದು ಹೇಳಿದ್ದಾರೆ. ಸುಲೇಮಾನ್ ಹಾಜಿಯವರು ನಮ್ಮ ಮೊಬೈಲನ್ನು ಕೊಟ್ಟುಬಿಡಿ ಎಂದಿದ್ದಕ್ಕೆ, ನೀವು ಬಿಸಿ ರೋಡ್ ಬನ್ನಿ ಅಲ್ಲಿ ಕೊಡುತ್ತೇವೆ ಎಂದಿದ್ದಾರೆ.
ಅದರಂತೆ, ಸುಲೇಮಾನ್ ಮತ್ತು ಅವರ ಮಗ ಖಾಲಿದ್ ತಮ್ಮ ಇನ್ನೋವಾ ಕಾರಿನಲ್ಲಿ ಅವರನ್ನು ಹಿಂಬಾಲಿಸಿದ್ದಾರೆ. ಆದರೆ ಎರ್ಟಿಕಾದಲ್ಲಿದ್ದ ದರೋಡೆಕೋರರು ಕೆಲವೇ ಕ್ಷಣದಲ್ಲಿ ವೇಗವಾಗಿ ತೆರಳಿದ್ದು ಕಲ್ಲಡ್ಕ ತಲುಪುವ ಮೊದಲೇ ಮಾಯವಾಗಿದ್ದರು. ಖಾಲಿದ್ ತನ್ನ ಅಜ್ಜಿಯ ಕೈಯಲ್ಲಿದ್ದ ಮೊಬೈಲನ್ನು ಹಿಡಿದುಕೊಂಡಿದ್ದು, ತನ್ನ ಮತ್ತು ತಂದೆಯ ಮೊಬೈಲಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಇದು ತಿಳಿಯುತ್ತಲೇ ಏನೋ ಎಡವಟ್ಟು ಆಗಿದೆಯೆಂದು ನೇರವಾಗಿ ಮರಳಿ ಬಂದು ಬೋಳಂತೂರಿನ ಯುವಕರಲ್ಲಿ ವಿಷಯ ತಿಳಿಸಿದ್ದಾರೆ. ಇವರ ಮನೆಯಿಂದ 50 ಮೀಟರ್ ದೂರದಲ್ಲಿ ಮಸೀದಿ ಮತ್ತು ರಾತ್ರಿಯೂ ಬಹಳಷ್ಟು ಯುವಕರು ಇರುತ್ತಿದ್ದರು. ಅವರ ಎದುರಿನಿಂದಲೇ ಅಧಿಕಾರಿಗಳೆಂಬ ಭಯದಲ್ಲಿ ಕಾರಿನಲ್ಲಿ ನೇರ ಹೋಗಿದ್ದವರು ಮತ್ತೆ ಬಂದು ದರೋಡೆ ವಿಷಯ ಹೇಳಿಕೊಂಡಿದ್ದಾರೆ.
ಈ ಬಗ್ಗೆ ದೂರುದಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದಾಗ ಅಪರಿಚಿತ ವ್ಯಕ್ತಿಗಳು ಈಡಿ ಅಧಿಕಾರಿಗಳಂತೆ ನಟಿಸಿ ಮನೆಯಿಂದ ಸುಮಾರು 25 ರಿಂದ 30 ಲಕ್ಷ ಹಣವನ್ನು ಮತ್ತು 5 ಮೊಬೈಲ್ ಫೋನ್‌ಗಳನ್ನು ಪಡೆದುಕೊಂಡು ವಂಚನೆ ಮಾಡಿರುವುದು ತಿಳಿದು ಬಂದಿದೆ ಎಂದು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 02/2025 ಕಲಂ: 319(2), 318(4) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸದ್ರಿ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರು ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳ ಪತ್ತೆಗಾಗಿ ಸೂಕ್ತ ಸಲಹೆ/ಸೂಚನೆ ನೀಡಿದರು.
Discover more from Coastal Times Kannada
Subscribe to get the latest posts sent to your email.
Discussion about this post