ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆರಳು ಮುದ್ರೆ ಘಟಕದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪಣ್ಣ ನಾಗವ್ವ ಮಾದರ(37) ಶುಕ್ರವಾರ ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೂಲತಃ ಬೆಳಗಾವಿಯ ರಾಮದುರ್ಗಾ ಹೊಸೂರು ನಿವಾಸಿಯಾಗಿದ್ದ ತಿಪ್ಪಣ್ಣ ಅವರು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ 4 ಗಂಟೆಯ ವೇಳೆಗೆ ಪಾಂಡೇಶ್ವರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಎಸ್. ಪಿ. ಕಛೇರಿಯಲ್ಲಿರುವ ಬೆರಳು ಮುದ್ರೆ ಘಟಕದ ಕಚೇರಿಗೆ ನಡೆದುಕೊಂಡು ಹೊಗುತ್ತಿದ್ದಾಗ ಎ.ಬಿ . ಶೆಟ್ಟಿ ಸರ್ಕಲ್ ಬಳಿ ಅಸ್ವಸ್ತಗೊಂಡು ಕುಸಿದು ಬಿದ್ದದ್ದಿದ್ದಾರೆ. ತಕ್ಷಣ ಅವರನ್ನು ಆ್ಯಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
2011ರಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ಬಾಗಲಕೋಟೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯದಲ್ಲಿದ್ದವರು ಮುಂಬಡ್ತಿಗೊಂಡು ದಕ್ಷಿಣ ಕನ್ನಡ ಜಿಲ್ಲಾ ಬೆರಳು ಮುದ್ರೆ ಘಟಕದಲ್ಲಿ ಆರು ತಿಂಗಳುಗಳಿಂದ ಎ.ಎಸ್.ಐ. (ಎಫ್.ಪಿ.ಬಿ.) ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ದೀಪಾ ತಿಪ್ಪಣ್ಣ ಮಾದರ್ ಮತ್ತು ಮಕ್ಕಳಾದ ನಿಹಾರಿಕಾ, ಅನ್ವಿತಾ ಹಾಗೂ ನಿಶಾಂತ್ ಎಂಬ ಮೂರು ಮಕ್ಕಳನ್ನು ಅಗಲಿದ್ದಾರೆ.