ಮಂಗಳೂರು: ನಾವು ಹಿಂದಿನ ಪ್ರಾಸ್ಪೆಕ್ಟಸ್ನಲ್ಲಿನ ನಿಯಮಗಳನ್ನು ಒಪ್ಪಿ ಕಾಲೇಜಿಗೆ ಬಂದಿದ್ದೇವೆ. ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಧರಿಸಿ ಕಾಲೇಜಿಗೆ ಬರುತ್ತೀದ್ದೇವೆ. ಇದೀಗ ಹಿಜಾಬ್ ಧರಿಸದಂತೆ ಕಾಲೇಜಿನ ಈ ಆದೇಶದ ಹಿಂದೆ ಹೈ ಕೋರ್ಟ್ ಆದೇಶ ಇಲ್ಲ. ಹೀಗಾಗಿ ಇದು ಎಬಿವಿಪಿ ಒತ್ತಡ. ಈ ವರ್ಷ ಹಳೆಯ ವಸ್ತ್ರ ಸಂಹಿತೆಯನ್ನು ಮುಂದುವರಿಸಿ ನಮಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿ ಎಂದು ಹಿಜಾಬ್ ಪರ ವಿದ್ಯಾರ್ಥಿನಿಯರು ಬೇಡಿಕೆ ಮುಂದುವರಿಸಿದ್ದಾರೆ.
ಹಿಜಾಬ್ ಪರ ವಿದ್ಯಾರ್ಥಿನಿಯರ ಪರವಾಗಿ ಸಮನ್ವಯ ಸಮಿತಿ ಹೆಸರಲ್ಲಿ ಸುದ್ದಿಗೋಷ್ಠಿ ನಡೆಸಲಾಗಿದ್ದು ಗೌಸಿಯಾ ಎಂಬ ವಿದ್ಯಾರ್ಥಿನಿ ತಮಗಾದ ತೊಂದರೆಯನ್ನು ವಿವರಿಸಿದ್ದಾರೆ. ಈ ಹಿಂದೆ ಕಾಲೇಜಿನಲ್ಲಿ ಯಾವುದೇ ಹಿಜಾಬ್ ಸಮಸ್ಯೆ ಇರಲಿಲ್ಲ. ಹೈಕೋರ್ಟ್ ಆದೇಶದ ಬಳಿಕವೂ ಮೇ 7ರ ವರೆಗೆ ನಾವು ಹಿಜಾಬ್ ಹಾಕ್ಕೊಂಡೇ ತರಗತಿಗೆ ಹೋಗಿದ್ದೆವು. ಆದರೆ ಕೆಲವು ದಿನಗಳ ಬಳಿಕ ರಾತ್ರೋರಾತ್ರಿ ಒಂದು ಮೆಸೇಜ್ ಬಂದಿತ್ತು. ಕಾಲೇಜಿನಲ್ಲಿ ಹಿಜಾಬ್ ಬ್ಯಾನ್ ಮಾಡಿರುವ ಬಗ್ಗೆ ಅದರಲ್ಲಿ ಹೇಳಿತ್ತು. ಅನಧಿಕೃತ ಮಾಹಿತಿ ಆಗಿದ್ದರಿಂದ ಪ್ರಾಂಶುಪಾಲರ ಬಳಿ ಮರುದಿನ ಕೇಳಿದ್ದೆವು. ಆಗ ಅವರು ಅದು ನಾವೇ ಕಳಿಸಿಕೊಟ್ಟ ಮೆಸೇಜ್ ಎಂದು ಹೇಳಿದ್ದರು.
ಇದರ ಬಗ್ಗೆ ಕಾನೂನು ಹೋರಾಟ ಮಾಡಿದರೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಪ್ರಾಂಶುಪಾಲರು ಶಿರವಸ್ತ್ರ ತೆಗೆಯುವ ಯಾವುದೇ ಉದ್ದೇಶ ಇಲ್ಲ ಅಂದಿದ್ದಾರೆ. ಎಬಿವಿಪಿ ಒತ್ತಡದಿಂದಲೇ ಪ್ರಾಂಶುಪಾಲರು ಈ ಆದೇಶ ಮಾಡಿದ್ದಾರೆ. ತಮ್ಮ ಬೆಂಬಲಕ್ಕೆ ಧಾರ್ಮಿಕ ಮುಖಂಡರು ಬರುವಂತೆ ಮನವಿ ಮಾಡುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಿವಿ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಜ್ ಅವರು ಹಿಜಾಬ್ ಗೊಂದಲ ಸರಿಪಡಿಸಲು ನಾವು ಎರಡು ದಿನದ ಗಡುವು ದ.ಕ ಜಿಲ್ಲಾಡಳಿತಕ್ಕೆ ಕೊಡುತ್ತೇವೆ. ಇಲ್ಲದಿದ್ದರೆ ಜಿಲ್ಲಾದ್ಯಂತ ಬೃಹತ್ ಹೋರಾಟ ನಡೆಸುತ್ತೇವೆ ಎಂದರು.