ಕಡಬ: ಯುವತಿಯ ಫೇಸ್‌ಬುಕ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಕಡಬದ ಯುವಕನನ್ನು ಪಶ್ಚಿಮ ಬಂಗಾಳದ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳದ ಯುವತಿಗೆ ಸಂಬಂಧಿಸಿದ ಖಾತೆಯನ್ನು ಕಡಬದ ನಿವಾಸಿ ಸಂಜಯ್ ಕೃಷ್ಣ ಎಂಬಾತ ದುರುಪಯೋಗ ಪಡಿಸಿಕೊಂಡ ಬಗ್ಗೆ ಯುವತಿಯು ಪಶ್ಚಿಮ ಬಂಗಾಳದಲ್ಲಿ ದೂರು ದಾಖಲಿಸಿದ್ದರು.
ಬೆಂಗಳೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿಯ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿತ್ತು. ಇದನ್ನು ಇತ್ತೀಚೆಗೆ ತನ್ನ ಊರಿಗೆ ತೆರಳಿದ್ದ ವೇಳೆ ಯುವತಿ ಗಮನಿಸಿ, ಕೊಲ್ಕತ್ತಾದಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಅಶ್ಲೀಲ ಫೋಟೋ, ಮೆಸೇಜ್ ಗಳನ್ನು ಹರಿಯಬಿಡುತ್ತಿದ್ದುದನ್ನು ಗಮನಿಸಿ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಅದರಂತೆ, ಕೊಲ್ಕತ್ತಾ ಕೋರ್ಟ್ ನಲ್ಲಿ ಬಾಡಿ ವಾರೆಂಟ್ ಪಡೆದು ಮಂಗಳೂರಿಗೆ ಬಂದಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸಂಜಯ್ ಕೃಷ್ಣ ಮಂಗಳೂರಿನಲ್ಲಿ ವ್ಯವಹಾರ ಮಾಡಿಕೊಂಡಿದ್ದ ಎನ್ನುವ ವಿಚಾರ ತಿಳಿದುಬಂದಿದೆ.
ಪಶ್ಚಿಮ ಬಂಗಾಳ ಪೊಲೀಸರು ಕಡಬ ಪೊಲೀಸರ ಸಹಾಯದಿಂದ ಸಂಜಯ್ ಕೃಷ್ಣನನ್ನು ಬಂಧಿಸಿ, ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಗಿದೆ.