ಬಂಟ್ವಾಳ, ಸೆ.4 : ತಾಲೂಕಿನ ಬಾರೆಕಾಡ್ ಎಂಬಲ್ಲಿ ಕಲ್ಲಿನ ಕೋರೆಯಲ್ಲಿ ಶೇಖರವಾಗಿದ್ದ ನೀರಿನಲ್ಲಿ ಆಟವಾಡಲು ಇಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.
ಬಂಟ್ವಾಳ ಕಸ್ಬಾ ಗ್ರಾಮದ ಬಾರೆಕಾಡ್ ಕ್ವಾಟ್ರಸ್ ನಿವಾಸಿ ಮುಹಮ್ಮದ್ ಸಾದಿಕ್ ಅವರ ಪುತ್ರ ಮುಹಮ್ಮದ್ ಸೌಹಾದ್ (11) ಮೃತ ಬಾಲಕ. ಸುತ್ತ ಬೇಲಿ ಹಾಕಿದ್ದ ಕೆಂಪು ಕಲ್ಲಿನ ಕೋರೆಯಲ್ಲಿ ಮಳೆಯಿಂದಾಗಿ ನೀರು ತುಂಬಿತ್ತು.
ಇಬ್ಬರು ಸ್ನೇಹಿತರ ಜೊತೆ ನೀರಾಟದಲ್ಲಿ ತೊಡಗಿದ್ದಾಗ ಸೌಹಾದ್ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಆತನ ಸ್ನೇಹಿತರು ಸ್ಥಳೀಯರಿಗೆ ಮಾಹಿತಿ ನೀಡಿದ್ದು ಹುಡುಗನನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದಾನೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕಳೆದ ಆರು ತಿಂಗಳಿನಿಂದ ಕೋರೆಯಲ್ಲಿ ಕೆಲಸ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಸುತ್ತ ಬೇಲಿ ಹಾಕಿದ್ದರೂ ನೀರು ನಿಂತಿತ್ತು.