ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ನಗರಕ್ಕೆ ಬಸ್ ಸೌಕರ್ಯ ಒದಗಿಸಬೇಕು ಎನ್ನುವ ಬಹು ಕಾಲದ ಬೇಡಿಕೆ ಇನ್ನೂ ಈಡೇರಿಲ್ಲ. ಪ್ರಮುಖ ರೈಲು ನಿಲ್ದಾಣಮಂಗಳೂರು ಜಂಕ್ಷನ್‌ನಿಂದ ನಗರಕ್ಕೆ ಸೂಕ್ತ ಬಸ್ ಸೌಕರ್ಯವಿಲ್ಲದೆ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಹಂಪನಕಟ್ಟೆಯಿಂದ ಸುಮಾರು 5 ಕಿ.ಮೀ. ದೂರದ ಪಡೀಲ್ ಸಮೀಪದಲ್ಲಿದೆ. ಪ್ರಸ್ತುತ ಇಲ್ಲಿಗೆ ಹಗಲಿನ ವೇಳೆ ವಿವಿಧ ಕಡೆಗಳಿಂದ ಹಲವು ರೈಲುಗಳು ಬರುತ್ತಿವೆ. ನಗರಕ್ಕೆ ಬರಲು ಕಾರು ಅಥವಾ ಆಟೋ ರಿಕ್ಷಾಗಳನ್ನೇ ಆಶ್ರಯಿಸಬೇಕಾಗಿದೆ. ಇಲ್ಲದಿದ್ದರೆ 1 ಕಿ.ಮೀ. ನಡೆದುಕೊಂಡು ಹೋಗಿ ಸಿಟಿ ಬಸ್‌ಗಳಲ್ಲಿ ಬರಬೇಕಿದೆ. ಲಗೇಜುಗಳನ್ನು ಹೊತ್ತುಕೊಂಡು ನಡೆಯುವುದು ಅಸಾಧ್ಯ. ರೈಲು ನಿಲ್ದಾಣಕ್ಕಿದ್ದ ಎರಡು ಸಿಟಿ ಬಸ್‌ಗಳು ಕರೊನಾ ಲಾಕ್‌ಡೌನ್ ಬಳಿಕ ಸ್ಥಗಿತಗೊಂಡಿವೆ.
ಹಗಲಿನಲ್ಲಿ ಬರುವ ರೈಲುಗಳು: ಮಂಗಳೂರು ಜಂಕ್ಷನ್‌ಗೆ ಹಗಲು ವಿವಿಧ ವೇಳೆಯಲ್ಲಿ ಕೊಂಕಣ ಮಾರ್ಗ, ಹಾಸನ, ಕೇರಳ ಭಾಗದಿಂದ ಹಲವಾರು ರೈಲುಗಳು ಆಗಮಿಸುತ್ತಿವೆ. ಪ್ರಸ್ತುತ ಇರುವ ವೇಳಾಪಟ್ಟಿಯಂತೆ ಬೆಳಗ್ಗೆ 5.45ಕ್ಕೆ ನೇತ್ರಾವತಿ ಎಕ್ಸ್‌ಪ್ರೆಸ್, 6.45ಕ್ಕೆ ಬೆಂಗಳೂರು-ಮಂಗಳೂರು ರಾತ್ರಿ ರೈಲು, ಸಂಜೆ 4.30ಕ್ಕೆ ಯಶವಂತಪುರ-ಮಂಗಳೂರು ಜಂಕ್ಷನ್, ಸಂಜೆ 6 ಗಂಟೆಗೆ ನವದೆಹಲಿ-ತಿರುವನಂತಪುರ ಎಕ್ಸ್‌ಪ್ರೆಸ್, 7 ಗಂಟೆಗೆ ಮಂಗಳಾ ಎಕ್ಸ್‌ಪ್ರೆಸ್ ರೈಲುಗಳು ಆಗಮಿಸುತ್ತಿವೆ. ರಾತ್ರಿ ಕೂಡ ವಿವಿಧ ಸಮಯಗಳಲ್ಲಿ ರೈಲುಗಳ ಆಗಮನ ನಿರ್ಗಮನ ಇರುತ್ತವೆೆ. ಪ್ರತಿಯೊಂದು ರೈಲಿನಿಂದಲೂ ಮಂಗಳೂರು ನಗರ ಸುತ್ತಮುತ್ತಲಿನ ಪ್ರದೇಶಕ್ಕೆ ಹೋಗುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.
ಕೆಎಸ್ಸಾರ್ಟಿಸಿ ಬಸ್‌ಗೆ ಬೇಡಿಕೆ: ಸುಬ್ರಹ್ಮಣ್ಯ ರೈಲು ನಿಲ್ದಾಣಕ್ಕೆ ಇರುವಂತೆ ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ನಗರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆ ಬಹು ಕಾಲದಿಂದ ಇದೆ. ಕೆಲವು ಆಟೋ ಚಾಲಕರು ದುಬಾರಿ ಬಾಡಿಗೆ ವಸೂಲಿ ಮಾಡುವ ಆರೋಪವಿದೆ. ಇನ್ನು ಕೆಲವು ಆಟೋ ಚಾಲಕರು ಜಂಕ್ಷನ್ ರೈಲು ನಿಲ್ದಾಣಕ್ಕೆ ಬಾಡಿಗೆಗೆ ಬರಲು ಒಪ್ಪುವುದಿಲ್ಲ. ಒಬ್ಬೊಬ್ಬರು ಟ್ಯಾಕ್ಸಿ ಬಾಡಿಗೆ ಮಾಡಿಕೊಂಡು ಹೋಗುವುದು ಹೊರೆಯಾಗುತ್ತದೆ. ಅದಕ್ಕಾಗಿ ಕೆಎಸ್ಸಾರ್ಟಿಸಿ ಬಸ್ ಸೌಲಭ್ಯ ಕಲ್ಪಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎನ್ನುವ ಜನಾಭಿಪ್ರಾಯವಿದೆ.
Discover more from Coastal Times Kannada
Subscribe to get the latest posts sent to your email.
Discussion about this post