ಮಂಗಳೂರು: ಉದ್ಯಮಿಯೊಬ್ಬರಿಗೆ ಭೂಗತ ಪಾತಕಿ ಕಲಿ ಯೋಗಿಶ್ ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲ್ಕಿ ಉದ್ಯಮಿ ನಾಗರಾಜ್ ಎಂಬುವರಿಗೆ ಭೂಗತ ಪಾತಕಿ ಕಲಿ ಯೋಗಿಶ್ ಇಂಟರ್ನೆಟ್ ಕಾಲ್ ಮೂಲಕ ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ್ದಾನೆ. ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಕಲಿ ಯೋಗಿಶ್ ಅಲ್ಲಿಂದಲೇ ಜೀವ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2017ರಲ್ಲಿಯೂ ಇದೇ ರೀತಿ ಬೆದರಿಕೆ: ಉದ್ಯಮಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನಿಲ್ ದಾಸ್ ಗೆ ಭೂಗತ ಪಾತಕಿ ಕಲಿ ಯೋಗಿಶ್ ಹೆಸರಲ್ಲಿ ಬೆದರಿಕೆ ಕರೆ ಬಂದಿರುವ ಬಗ್ಗೆ ಕದ್ರಿ ಪೊಲೀಸರಿಗೆ 2017ರಲ್ಲಿ ದೂರು ಬಂದಿತ್ತು. ಕಲಿ ಯೋಗಿಶ್ ಹೆಸರಲ್ಲಿ ಕೆಲವು ದಿನಗಳಿಂದ ಬೆದರಿಕೆ ಕರೆ ಬರುತ್ತಿದ್ದು, ಅವರು ನಿರ್ಲಕ್ಷ್ಯ ಮಾಡಿದ್ದರು. ಮತ್ತೆ ಕರೆ ಬಂದಿದ್ದು, ತಕ್ಷಣವೇ 50 ಲಕ್ಷ ರೂ. ನೀಡಬೇಕು. ಈ ಬಾರಿ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಅನಿಲ್ ದಾಸ್ ಪೊಲೀಸರಿಗೆ ದೂರು ನೀಡಿದ್ದರು.
ಕಲಿ ಯೋಗಿಶ್ ಎಲ್ಲಿದ್ದಾನೆ… ಪಾತಕಿ ಕಲಿ ಯೋಗಿಶ್ ಈಗ ಎಲ್ಲಿದ್ದಾನೆ ಎಂಬುದು ಸ್ಪಷ್ಟವಾಗಿ ಪೊಲೀಸರಿಗೂ ಗೊತ್ತಾಗುತ್ತಿಲ್ಲ. ಆದರೆ ಆತ ಬ್ಯಾಂಕಾಕ್ ಅಥವಾ ಮೊರಕ್ಕೋದಲ್ಲಿ ಇದ್ದಾನೆ ಎಂದು ಹೇಳಲಾಗುತ್ತಿದೆ. ಕಲಿ ಹಾಗೂ ಇನ್ನು ಕೆಲವು ಮಂದಿ ಭೂಗತ ಪಾತಕಿಗಳ ಮೇಲೆ ಮಂಗಳೂರು ಪೊಲೀಸರು ಜಾರಿ ಮಾಡಿರುವ ರೆಡ್ ಕಾರ್ನರ್ ನೋಟಿಸ್ ಈಗಲೂ ಚಾಲ್ತಿಯಲ್ಲಿದೆ.
Discussion about this post