ಮಂಗಳೂರು: ಸೆ 5: ರೈಲು ಹಳಿಗಳಿಗೆ ಅಳವಡಿಸುವ ಕ್ಲಿಪ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ಸೆ 4 ರಂದು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಕಲ್ಲಡ್ಕ ಬಳಿಯ ರೈಲು ಹಳಿಯಲ್ಲಿ ಕ್ಲಿಪ್ ಕಳವು ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ರೈಲ್ವೆ ಸಿಂಬ್ಬಂದಿಗಳು ಹಾಗೂ ಸಾರ್ವಜನಿಕರ ಕೈಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಆರೋಪಿಗಳ ಪೈಕಿ ಒರ್ವ ಬಂಟ್ವಾಳ ತಾಲೂಕಿನ ಕಾವಳ ಕಟ್ಟೆಯವನೆಂದು ಮೂಲಗಳು ತಿಳಿಸಿವೆ. ತಂಡವೊಂದು ಸುಮಾರು ಒಂದು ತಿಂಗಳಿನಿಂದ ರೈಲು ಹಳಿಯ ಕ್ಲಿಪ್ಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಸಿಂಬ್ಬಂದಿಗಳು ಸ್ಥಳೀಯರ ಸಹಾಯದಿಂದ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು.
ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಮಫ್ತಿಯಲ್ಲಿದ್ದ ರೈಲ್ವೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಒಂದು ಟಾಟಾ ಏಸ್ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ಸಕಲೇಶಪುರ ರೈಲ್ವೆ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.
ರೈಲ್ವೆ ಹಳಿಗಳ ಕ್ಲಿಪ್ ಕಳ್ಳತನ ಮಾಡುವುದರಿಂದ ಅದರ ಮೇಲೆ ಒಡಾಡುವ ರೈಲುಗಳಿಗೆ ಅಪಾಯವಿದೆ ಎಂದು ಹೇಳಲಾಗುತ್ತಿದೆ ರೈಲ್ ಒಡಾಟದ ವೇಳೆ ರೈಲ್ ಹಳಿ ಬಿಟ್ಟು ಕೆಳಗೆ ಇಳಿದರೇ ಬೋಗಿಗಳು ಉರುಳಿ ಬೀಳುವ ಸಾಧ್ಯತೆಯೂ ಇದೆ .