ಮಂಗಳೂರು: ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿಬಿದ್ದ ಘಟನೆ ಪಣಂಬೂರಿನ ಎಂಸಿಎಫ್ ರೈಲ್ವೆ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ.
‘ವಿಶಾಲ್ ಮೋಟಾರ್ಸ್’ಗೆ ಸೇರಿದ ಬಸ್ ಬೆಳಗ್ಗೆ ಸುಮಾರು 6:30ರ ವೇಳೆಗೆ ಪ್ರಯಾಣಿಕರೊಂದಿಗೆ ಕಾರ್ಕಳದಿಂದ ಹೊರಟಿತ್ತು. ಬೆಳಗ್ಗೆ ಸುಮಾರು 8:10ರ ಸುಮಾರಿಗೆ ಪಣಂಬೂರು ಸಮೀಪದ ಎಂಸಿಎಫ್ ರೈಲ್ವೆ ಗೇಟ್ ಬಳಿ ತಲುಪಿದಾಗ, ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯಿಂದ ಪಕ್ಕಕ್ಕೆ ಸರಿದು ಉರುಳಿಬಿದ್ದಿದೆ.


ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಹೊರಗೆ ತಂದರು. ಘಟನೆಯಲ್ಲಿ ಬೆಳ್ಮಣ್ ನಿವಾಸಿ ಆದಿತ್ಯ ಎಂಬ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. ಉಳಿದೆಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಅಪಘಾತದ ಕುರಿತು ಮಾಹಿತಿ ಹಂಚಿಕೊಂಡಿರುವ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ರವಿಶಂಕರ್ ಅವರು “ಕಾರ್ಕಳದಿಂದ ಮಂಗಳೂರಿಗೆ ಬರುತ್ತಿದ್ದ ವಿಶಾಲ್ ಮೋಟಾರ್ಸ್ ಸಂಸ್ಥೆಯ ಎಕ್ಸ್‌ಪ್ರೆಸ್ ಬಸ್ ಬೆಳಗ್ಗೆ 8:10ರ ಸುಮಾರಿಗೆ ಪಣಂಬೂರಿನ ಎಂಸಿಎಫ್ ರೈಲ್ವೆ ಗೇಟ್ ಬಳಿ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕನ ಅಜಾಗರೂಕತೆಯಿಂದಾಗಿ ಬಸ್ ರಸ್ತೆಯಿಂದ ಪಕ್ಕಕ್ಕೆ ಸರಿದು ಬಿದ್ದಿದೆ. ಬಸ್ಸಿನಲ್ಲಿದ್ದ ಆದಿತ್ಯ ಎಂಬ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದೆಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ” ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post