ಮಂಗಳೂರು, ಅ.3: ನಗರದ ಕೆಪಿಟಿ ಮತ್ತು ನಂತೂರು ವೃತ್ತದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ -66ರಲ್ಲಿ ಎರಡೂ ಕಡೆ ಉಂಟಾಗುವ ವಾಹನ ದಟ್ಟಣೆಯನ್ನು ನಿಭಾಯಿಸಲು ಹೊಸತಾಗಿ ಫ್ಲೈಓವರ್ ನಿರ್ಮಾಣಕ್ಕೆ ಹೆದ್ದಾರಿ ಅಧಿಕಾರಿಗಳು ಮುಂದಾಗಿದ್ದಾರೆ. ಎನ್ಎಂಪಿಟಿ ಬಂದರು ಇಲಾಖೆಯ ಟ್ರಸ್ಟ್ ನಡಿ ಈ ಫ್ಲೈಓವರ್ ನಿರ್ಮಿಸಲು ಹುಬ್ಬಳ್ಳಿ ಮತ್ತು ಧಾರವಾಡ ಮೂಲದ ಕಂಪನಿಗಳಿಗೆ ಟೆಂಡರ್ ನೀಡಲಾಗಿದೆ.
ಮಂಗಳೂರು ನಗರದ ನಂತೂರಿನಿಂದ ಕೆಪಿಟಿವರೆಗೆ ವಾಹನ ದಟ್ಟಣೆ ಕಡಿಮೆ ಮಾಡಲು ಮೇಲ್ಸೇತುವೆ ನಿರ್ಮಾಣಕ್ಕೆ ಎನ್ಎಚ್ಎಐ ಸಿದ್ಧತೆ ನಡೆಸುತ್ತಿತ್ತು. ಇದಕ್ಕಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿ 600ಕ್ಕೂ ಹೆಚ್ಚು ಮರಗಳಿದ್ದು ಅವುಗಳ ಪೈಕಿ 370 ಮರಗಳನ್ನು ತೆರವುಗೊಳಿಸಲು ಮತ್ತು ಉಳಿದವನ್ನು ಕಡಿದು ತೆರವು ಮಾಡಲು ಅರಣ್ಯ ಇಲಾಖೆಯೂ ಒಪ್ಪಿಗೆ ನೀಡಿದೆ. ಆದರೆ ಅಧಿಕಾರಿಗಳು ಸಣ್ಣ ರೀತಿಯ ಮರಗಳನ್ನು ತೆರವು ಮಾಡುವ ಬದಲು ಬುಡದಿಂದಲೇ ಕತ್ತರಿಸಲು ಮುಂದಾಗಿದ್ದಾರೆ. ಆದರೆ ಮರಗಳ ಕಡಿಯಲು ಮಂಗಳೂರಿನ ಪರಿಸರ ಪ್ರೇಮಿ ಸಂಘಟನೆ ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ವಿರೋಧ ವ್ಯಕ್ತಪಡಿಸಿದ್ದರು.
ಮೊದಲು ಮರಗಳನ್ನು ಸ್ಥಳಾಂತರ ಮಾಡಿ ಬಳಿಕ ಮರಗಳ ಕಡಿಯುವ ಪ್ರಕ್ರಿಯೆ ಮಾಡಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದರು. ಮರಗಳ ಸ್ಥಳಾಂತರ ಹಾಗೂ ಕಡಿಯುವ ಪ್ರಕ್ರಿಯೆಯನ್ನು ಸಕಲೇಶಪುರದ ಏಜೆನ್ಸಿಯೊಂದಕ್ಕೆ ವಹಿಸಲಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಏಕಾಏಕಿ ಅರಣ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಈ ಏಜೆನ್ಸಿ ಸ್ಥಳಾಂತರ ಮಾಡಬಹುದಾದ ಮರಗಳ ಬುಡಕ್ಕೆ ಕೊಡಲಿ ಇಟ್ಟು ಮಾರಣಹೋಮ ಮಾಡಿದೆ.
ಸಿಟಿಝನ್ ಫಾರ್ ಸಸ್ಟೈನೇಬಲ್ ಡೆವಲಪ್ಮೆಂಟ್ ಪರಿಸರ ಪ್ರೇಮಿ ಸಂಘಟನೆಯ ಸದಸ್ಯರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಮರ ಕಡಿಯುವುದನ್ನು ತಡೆದಿದ್ದಾರೆ. ಬಳಿಕ ಅಲ್ಲಿಗೆ ಬಂದ ಅರಣ್ಯಾಧಿಕಾರಿಗಳು, ಮರ ಕಡಿಯುವ ಏಜೆನ್ಸಿ ಹಾಗೂ ಪರಿಸರವಾದಿಗಳ ನಡುವೆ ವಾಗ್ವಾದ ನಡೆದಿದೆ.
ಮರಗಳ ಮಾರಣಹೋಮ ವಿರೋಧಿಸಿದ ಪರಿಸರ ಪ್ರೇಮಿಗಳು ಕಡಿದು ಬಿದ್ದ ಮರಗಳ ತುಂಡುಗಳಿಗೆ ಬಿಳಿ ಬಟ್ಟೆ ಹಾಸಿ ಶವದ ರೀತಿ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಅಭಿವೃದ್ಧಿ ಬೇಕು ಆದರೆ ಪರಿಸರ ಮಾರಕವಾದ ಅಭಿವೃದ್ಧಿ ಬೇಡ ಎನ್ನುವುದು ಪರಿಸರ ಪ್ರೇಮಿಗಳ ಕಳಕಳಿಯಾಗಿದೆ.
ಪರಿಸರ ಹೋರಾಟಗಾರ ಜೀತ್ ಮಿಲನ್ ಹೇಳುವ ಪ್ರಕಾರ, ಕೆಪಿಟಿ ಮತ್ತು ನಂತೂರಿನಲ್ಲಿ ಪ್ರತ್ಯೇಕ ಫ್ಲೈಓವರ್ ಮಾಡಿದರೆ, ಇಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಯಲ್ಲ. ಕೆಪಿಟಿಯ ಬದಲು ಪದವು ಸ್ಕೂಲ್ ಬಳಿ ಮತ್ತಷ್ಟು ಸಮಸ್ಯೆ ಆಗುತ್ತದೆ. ಈಗಾಗಲೇ ಕುಳೂರು, ಕೊಟ್ಟಾರ, ಬಿಕರ್ನಕಟ್ಟೆ, ಬಿಸಿ ರೋಡ್ ಹೀಗೆ ಇವರು ಎಲ್ಲೆಲ್ಲಿ ಫ್ಲೈಓವರ್ ಮಾಡಿದ್ದಾರೋ, ಅಲ್ಲೆಲ್ಲ ದೊಡ್ಡ ಬ್ಲಂಡರ್ ಆಗಿದೆ. ವನ್ ವೇ ಫ್ಲೈಓವರ್ ಮಾಡಿದ್ದಲ್ಲದೆ, ಅನಗತ್ಯವಾಗಿ ದುಂದುವೆಚ್ಚ ಮಾಡಿದ್ದಾರೆ. ನಂತೂರಿನಲ್ಲಿ ಮಾಡುವ ಬದಲು ಬಿಕರ್ನಕಟ್ಟೆಯಲ್ಲಿ ಫ್ಲೈಓವರ್ ಮಾಡಿದ್ದಾರೆ. ಜನರ ದುಡ್ಡನ್ನು ಪೋಲು ಮಾಡುತ್ತಾರೆ. ಈಗ ಕೆಪಿಟಿ ಮತ್ತು ನಂತೂರಿನಲ್ಲೂ ಅಂತಹದ್ದೇ ಮತ್ತೊಂದು ಬ್ಲಂಡರ್ ಮಾಡುತ್ತಾರೆ, ಪ್ರಾಜೆಕ್ಟ್ ಪ್ಲಾನ್ ಕೇಳಿದರೆ ಅಧಿಕಾರಿಗಳು ಕೊಡುವುದಿಲ್ಲ.
ಇವರೀಗ ನಾವು ಹತ್ತು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಮರಗಳನ್ನು ಕಡಿಯುತ್ತಿದ್ದಾರೆ. ಈ ಮರಗಳಿಗೆ ನಾವೇ ನೀರು ಹಾಕಿ ಬೆಳೆಸಿದ್ದು. ಇವರು ಕಡಿದು ಹಾಕಲು ಒಂದು ಕ್ಷಣ ಸಾಕಾಗುತ್ತದೆ. ಹೆದ್ದಾರಿ ಇಲಾಖೆಯವರು ಮರ ಕಡಿಯಲು ಅರಣ್ಯ ಇಲಾಖೆಗೆ 58 ಲಕ್ಷ ಕೊಟ್ಟಿದ್ದಾರೆ. ನಾವು ಬೆಳೆಸಿದ ಮರಗಳನ್ನು ಅರಣ್ಯ ಇಲಾಖೆಯವರು ಹಣಕ್ಕಾಗಿ ಮಾರುತ್ತಿದ್ದಾರೆ. ಆದರೂ ಇವರು ಒಂದೊಳ್ಳೆ ಕೆಲಸ ಮಾಡಲ್ಲ. ಜನರನ್ನು ಮತ್ತೆ ಬಲಿಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post