ಮಂಗಳೂರು: ನಗರದ ರಥಬೀದಿಯ ಡಾ.ಪಿ. ದಯಾನಂದ ಪೈ–ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಿಜಾಬ್ ವಿವಾದ ಭುಗಿಲೆದ್ದಿದ್ದು, ವಿದ್ಯಾರ್ಥಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಹಾಗೂ ಕಾಲೇಜಿನ ಉಪನ್ಯಾಸಕರು ಪರಿಸ್ಥಿತಿ ತಿಳಿಗೊಳಿಸಿದರು.
ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರು. ಈ ಬಗ್ಗೆ ಮನವರಿಕೆ ಮಾಡಿದ ಪ್ರಾಂಶುಪಾಲ ಪ್ರೊ.ಸಿ. ರಾಜಶೇಖರ್ ಹೆಬ್ಬಾರ್, ‘ತಲೆಗೆ ಶಾಲು ಹಾಕಿ ಒಳಗೆ ಬನ್ನಿ. ಆದರೆ, ಅದಕ್ಕೆ ಪಿನ್ ಹಾಕಬೇಡಿ. ಇದರಿಂದ ಹಿಜಾಬ್ ಧರಿಸಿದಂತಾಗುತ್ತದೆ’ ಎಂದು ಹೇಳಿದರು.
ಇದಕ್ಕೆ ಸಮ್ಮತಿಸಿದ ವಿದ್ಯಾರ್ಥಿನಿಯರು ಕಾಲೇಜಿನ ಒಳಗೆ ಪ್ರವೇಶಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ತಕರಾರು ತೆಗೆದಿದ್ದು, ಹಿಜಾಬ್ ಧರಿಸಿ ಬಂದವರನ್ನು ಹೊರಗೆ ಕಳುಹಿಸುವಂತೆ ಒತ್ತಾಯಿಸಿದ್ದ. ಇದರಿಂದ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಯ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಿದರು.
ಸರ್ಕಾರಿ ಕಾಲೇಜಿಗೆ ಹೈಕೋರ್ಟ್ ಮಧ್ಯಂತರ ಆದೇಶ ಅನ್ವಯವಾಗುತ್ತದೆ. ಅದಕ್ಕಾಗಿ ಹಿಜಾಬ್ ಧರಿಸದಂತೆ ಮನವೊಲಿಸಲಾಗಿದೆ. ತಹಶೀಲ್ದಾರ್ ಕೂಡ ಕಾಲೇಜಿಗೆ ಬಂದಿದ್ದು, ವಿದ್ಯಾರ್ಥಿಗಳಿಗೆ ಮಧ್ಯಂತರ ಆದೇಶದ ಬಗ್ಗೆ ಮನವರಿಕೆ ಮಾಡಲು ಯತ್ನಿಸಿದರು. ಆದರೆ ವಿದ್ಯಾರ್ಥಿನಿಯರು ಒಪ್ಪದೇ ಹೊರಗೆ ಹೋದರು. ಎಂದು ಪ್ರೊ. ರಾಜಶೇಖರ್ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯೊಬ್ಬರು, ‘ಪ್ರಾಂಶುಪಾಲರು ತಲೆಗೆ ಶಾಲು ಹಾಕಿಕೊಂಡು ಪರೀಕ್ಷೆ ಬರೆಯಲು ಅನುಮತಿ ನೀಡಿದ್ದರು. ಆದರೆ, ತರಗತಿ ಕೋಣೆ ಪ್ರವೇಶಿಸುತ್ತಿದ್ದಂತೆಯೇ ವಿದ್ಯಾರ್ಥಿಯೊಬ್ಬ ತಕರಾರು ತೆಗೆದಿದ್ದ. ತರಗತಿಯಿಂದ ಹೊರಗೆ ಕಳುಹಿಸುವಂತೆ ಪ್ರಾಂಶುಪಾಲರನ್ನು ಒತ್ತಾಯಿಸಿದ’ ಎಂದು ದೂರಿದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಪರಿಸ್ಥಿತಿ ಪರಿಶೀಲಿಸಿದರು. ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post