ನವದೆಹಲಿ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ)ದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಬುಧವಾರ ಔಪಚಾರಿಕವಾಗಿ ಆಯ್ಕೆ ಮಾಡಲಾಗಿದ್ದು, ಜೂನ್ 8 ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ಸಂಜೆ ದೆಹಲಿಯಲ್ಲಿ ನಡೆದ ಎನ್ ಡಿಎ ನಾಯಕ ಸಭೆಯಲ್ಲಿ ಸರ್ಕಾರ ರಚನೆ ಬಗ್ಗೆ ಚರ್ಚಿಸಲಾಯಿತು. ಬಳಿಕ ನರೇಂದ್ರ ಮೋದಿ ಅವರನ್ನು ಮೈತ್ರಿಕೂಟದ ನಾಯಕರನ್ನಾಗಿ ಔಪಚಾರಿಕವಾಗಿ ಆಯ್ಕೆ ಮಾಡಲಾಯಿತು. ಇದು ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲು ದಾರಿ ಮಾಡಿಕೊಟ್ಟಿತು. ಇದೇ ವೇಳೆ ಬಡವರು, ಮಹಿಳೆಯರು, ಯುವಕರು, ರೈತರು ಮತ್ತು ಸಮಾಜದ ವಂಚಿತ ವರ್ಗಗಳ ಸೇವೆಗೆ ಮೈತ್ರಿ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುವ ನಿರ್ಣಯವನ್ನು ಎನ್‌ಡಿಎ ನಾಯಕರು ಅಂಗೀಕರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮೋದಿ ಅಧ್ಯಕ್ಷತೆಯಲ್ಲಿ ನಡೆದ ಎನ್ ಡಿಎ ಸಭೆಯಲ್ಲಿ ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು, ಜೆಡಿಯು ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಲ್‌ಜೆಪಿ(ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಕೂಡ ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಟಿಡಿಪಿ 16, ಜೆಡಿಯು 12, ಶಿಂಧೆ ನೇತೃತ್ವದ ಶಿವಸೇನೆ 7 ಮತ್ತು ಎಲ್‌ಜೆಪಿ(ರಾಮ್ ವಿಲಾಸ್) ಐದು ಸ್ಥಾನಗಳನ್ನು ಗೆದ್ದು ಮೋದಿ ಮೂರನೇ ಬಾರಿಗೆ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ನಾಯಕರು ಔಪಚಾರಿಕವಾಗಿ ಮೋದಿಯವರ ನಾಯಕತ್ವವನ್ನು ಬೆಂಬಲಿಸಿದ್ದು, ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಬೆಂಬಲ ಪತ್ರ ನೀಡಿವೆ ಎಂದು ಮೂಲಗಳು ತಿಳಿಸಿವೆ.
Discover more from Coastal Times Kannada
Subscribe to get the latest posts sent to your email.
Discussion about this post