ಕೋಯಿಕ್ಕೋಡ್: ನಿಫಾ ವೈರಸ್ ಸೋಂಕಿನ ಲಕ್ಷಣಗಳಿಂದ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ತಿಳಿಸಿದ್ದಾರೆ.
ಪರೀಕ್ಷೆಗೆಂದು ಕಳುಹಿಸಿದ ಬಾಲಕನ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ದೃಢಪಡಿಸಿದೆ.
‘ದುರದೃಷ್ಟವಶಾತ್, ಬಾಲಕ ಬೆಳಿಗ್ಗೆ 5 ಗಂಟೆಗೆ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಬಾಲಕನ ಸ್ಥಿತಿ ಗಂಭೀರವಾಗಿತ್ತು. ನಿನ್ನೆ ರಾತ್ರಿಯೇ ನಾವು ವಿವಿಧ ತಂಡಗಳನ್ನು ರಚಿಸಿದ್ದು, ನಿಫಾ ವೈರಸ್ ಪ್ರಕರಣಗಳ ಪತ್ತೆಹಚ್ಚುವಿಕೆಯನ್ನು ಆರಂಭಿಸಿದ್ದೇವೆ. ಬಾಲಕನ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪ್ರತ್ಯೇಕಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಾಲಕನಿಗೆ ತಗುಲಿರುವ ಸೋಂಕು ದೃಢಪಡಿಸಿಕೊಳ್ಳಲು ಪ್ಲಾಸ್ಮಾ, ಸಿಎಸ್ ಎಫ್ ಹಾಗೂ ಸೆರಂ ಸ್ಯಾಂಪಲ್ ಗಳನ್ನು ಪುಣೆ ಎನ್ಐವಿಗೆ ಕಳಿಸಲಾಗಿತ್ತು. ಶನಿವಾರ ರಾತ್ರಿ ನಿಫಾ ವೈರಸ್ ಪಾಸಿಟಿವ್ ಎಂದು ಬಂದಿತ್ತು. ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಯಿತು, ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ನಿಫಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೇರಳದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರದ ತಂಡ ಭೇಟಿ ನೀಡಲಿದೆ.
ದಕ್ಷಿಣ ಭಾರತದಲ್ಲಿಯೇ ಮೊದಲ ನಿಫಾ ವೈರಸ್ ಮೇ 19, 2018 ರಂದು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾಗಿತ್ತು. ಜೂನ್ 1, 2018ರ ವೇಳೆಗೆ 17 ಜನರು ಮೃತಪಟ್ಟು, 18 ಜನರಲ್ಲಿ ಸೋಂಕು ದೃಢಪಟ್ಟಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post