ಗಂಗೊಳ್ಳಿ ಸೆ.5 : ಗಾಳಿಸಹಿತ ಭಾರಿ ಮಳೆಗೆ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಮಗುಚಿಬಿದ್ದಿತ್ತು. ಇದರಲ್ಲಿದ್ದ ಮೂವರು ಮೀನುಗಾರರನನ್ನು ಕಂಚುಗೋಡು ಸಮೀಪದ ಕಡಲಿನಲ್ಲಿ ರಕ್ಷಿಸಲಾಗಿದೆ.
ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ರಾಮ ಖಾರ್ವಿ (65), ನಾಗರಾಜ ಖಾರ್ವಿ (38) ಮತ್ತು ವಿನಯ ಖಾರ್ವಿ (30) ಪ್ರಾಣಾಪಾಯದಿಂದ ಪಾರಾದ ಮೀನುಗಾರರು.
ಈ ಮೂವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಭಾರಿ ಗಾಳಿ, ಮಳೆ ಮತ್ತು ಅಲೆಗಳ ಹೊಡೆತದಿಂದ ದೋಣಿ ಕಂಚುಗೋಡು ಕಿನಾರೆ ಸಮೀಪ ಸಮುದ್ರದಲ್ಲಿ ಮಗುಚಿತು. ಈ ವಿಷಯ ತಿಳಿದು ಕೂಡಲೇ ಸಮೀಪದಲ್ಲಿದ್ದ ದೋಣಿಗಳಲ್ಲಿದ್ದವರು ಮೂವರನ್ನು ರಕ್ಷಿಸಿ ದಡ ಸೇರಿಸಿದ್ದಾರೆ.
ತ್ರಾಸಿ ಹೊಸಪೇಟೆ ಗ್ರಾಮದ ನಾಗ ಖಾರ್ವಿ ಅವರ ಶ್ರೀ ಯಕ್ಷೇಶ್ವರಿ ಅನುಗ್ರಹ ಎಂಬ ದೋಣಿಯಲ್ಲಿ ಮುಂಜಾನೆನೆ ನಾಗ ಖಾರ್ವಿ ಸಹಿತ ಮೂವರು ಮೀನುಗಾರಿಕೆಗೆ ತೆರಳಿದ್ದರು. ಬೆಳಗ್ಗೆ 7.30 ಗಂಟೆ ಸುಮಾರಿಗೆ ದೋಣಿಯಲ್ಲಿ ಬಲೆಯನ್ನು ತೆಗೆದುಕೊಳ್ಳುತ್ತಿರುವ ಸಂದರ್ಭ ಭಾರೀ ಗಾಳಿ ಮಳೆ ಮತ್ತು ಅಲೆಗಳ ಹೊಡೆತದಿಂದ ದೋಣಿಯು ತ್ರಾಸಿ ಹೊಸಪೇಟೆ ಕಡಲ ಕಿನಾರೆ ಸಮೀಪ ಸಮುದ್ರದಲ್ಲಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಮೂವರು ಮೀನುಗಾರರನ್ನು ಸಮೀಪದಲ್ಲಿದ್ದ ಮೀನುಗಾರಿಕೆ ನಡೆಸುತ್ತಿದ್ದ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ.
ದೋಣಿಯಲ್ಲಿದ್ದ ಇಂಜಿನ್, ಬಲೆ ಹಾಗೂ ಇನ್ನಿತರ ವಸ್ತುಗಳು ಮುಳುಗಿ 4ಲಕ್ಷ ರೂ. ನಷ್ಟವಾಗಿದೆ ಎಂದು ವಿನಯ ಖಾರ್ವಿ ಕರಾವಳಿ ಕಾವಲು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.