ಬೆಳ್ತಂಗಡಿ: ಬದುಕಲು ಬೇಕಿದ್ದುದು ಧೈರ್ಯ, ಸಾಹಸವಷ್ಟೆ ಹೊರತಾಗಿ ಬೇರೇನಿಲ್ಲ. ಬಂಕರ್ ನಲ್ಲಿ 7 ದಿನ ಕಳೆದು ಕ್ಷಿಪಣಿ ದಾಳಿಗಳನ್ನು ಕಣ್ಣೆದುರೇ ಕಂಡು ಒಂದೇ ಸಮನೆ ತಾಯ್ನಾಡಿನತ್ತ ಮರಳುವ ತವಕದಲ್ಲಿ ಜೀವ ಉಳಿಯಲು ಕಾರಣವಾಗಿದ್ದು ಭಾರತೀಯ ತ್ರಿವರ್ಣ ಧ್ವಜ” ಇದು ಯುದ್ಧಪೀಡಿತ ಉಕ್ರೇನ್ ಭೂಮಿಯಿಂದ ಉಜಿರೆಗೆ ತಲುಪಿದ ವೈದ್ಯಕೀಯ ವಿದ್ಯಾರ್ಥಿ ಹೀನಾ ಫಾತಿಮಾ ಅವರ ಅನುಭವ ಮಾತುಗಳು.
ಯುದ್ಧಗ್ರಸ್ತ ಉಕ್ರೇನ್ ನಿಂದ ಬೆಳ್ತಂಗಡಿ ತಾಲೂಕಿನ ಟಿ.ಬಿ.ಕ್ರಾಸ್ ನಿವಾಸಿ ದಿ.ಯಾಸೀನ್ ಮತ್ತು ಶಹನಾ ದಂಪತಿ ಪುತ್ರಿ ಹೀನಾ ಫಾತಿಮಾ ಅವರು ಮಾ.6 ರಂದು ಮಧ್ಯಾಹ್ನ 11 ಗಂಟೆಗೆ ಉಜಿರೆ ತಮ್ಮ ನಿವಾಸಕ್ಕೆ ತಲುಪಿದ ಬಳಿಕ ಉಕ್ರೇನ್ ನ ಆತಂಕದ ದಿನಗಳ ವಿಚಾರವನ್ನು ಹಂಚಿಕೊಂಡರು.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹೀನಾ ಫಾತೀಮಾ, ಭಾರತ ದೇಶದ ತ್ರಿವರ್ಣ ಧ್ವಜ ನಮ್ಮ ಪ್ರಾಣ ಉಳಿಸಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳೀಯವಾಗಿ ಬಣ್ಣವನ್ನು ಪಡೆದುಕೊಂಡು ಖಾಲಿ ಹಾಳೆಯಲ್ಲಿ ಬಣ್ಣ ಬಳಿದು ರಾಷ್ಟ್ರ ಧ್ವಜವನ್ನು ತಯಾರಿಸಿ ಅದನ್ನು ಹಿಡಿದುಕೊಂಡು ಹಲವು ಕಿಲೋ ಮೀಟರ್ ನಾವು ನಡೆದುಕೊಂಡು ಬಂದೆವು. ಈ ಸಂದರ್ಭದಲ್ಲಿ ಸಮೀಪದಲ್ಲಿ ಬಾಂಬ್ ದಾಳಿಯಾಗುತ್ತಿತ್ತು. ಆದರೆ, ನಮ್ಮ ಕೈಯಲ್ಲಿದ್ದ ರಾಷ್ಟ್ರ ಧ್ವಜ ಪ್ರಾಣ ರಕ್ಷಕವಾಯಿತು ಎಂದು ಹೀನಾ ಫಾತೀಮಾ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಕನ್ನಡಿಗೆ ನವೀನ್ ಮೃತಪಟ್ಟ ಬಳಿಕ ಎಲ್ಲರ ಆತಂಕ ಹೆಚ್ಚಾಗಿತ್ತು. ಆದರೆ, ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇವರೆಲ್ಲರ ಸಹಕಾರದಿಂದ ಸುರಕ್ಷಿತವಾಗಿ ಮರಳಲು ಸಾಧ್ಯವಾಯಿತು ಎಂದು ಹೀನಾ ಫಾತೀಮಾ ಪ್ರತಿಕ್ರಿಯೆ ನೀಡಿದ್ದಾರೆ.