ನೆಲ್ಯಾಡಿ : ನೆಲ್ಯಾಡಿಯ ಆರ್ಲ ಸಮೀಪದ ಮೊರಿಯಾ ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಹೊರ ಜಿಲ್ಲೆಯ ಜನರನ್ನು ಕರೆತಂದು ಮತಾಂತರ ನಡೆಸಲಾಗುತ್ತಿದೆ ಎನ್ನುವ ಹಿಂದೂ ಸಂಘಟನೆಗಳ ಆರೋಪ ನಿಜವಲ್ಲ ಎನ್ನುವ ಅಂಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಆರ್ಲಾ ಎಂಬಲ್ಲಿರುವ ಮೋರಿಯಾ ಎಂಬ ಕ್ರೈಸ್ತ ಪಾರ್ಥನಾ ಹಾಗೂ ಧ್ಯಾನ ಮಂದಿರದಲ್ಲಿ ಅನ್ಯ ಧರ್ಮೀಯರ ಮತಾಂತರ ಚಟುವಟಿಕೆ ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿ, ರಾತ್ರಿ ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ರಾತ್ರಿಯೇ ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ಪರಿಶೀಲನೆಯ ವೇಳೆ ಇಲ್ಲಿ ಶಿವಮೊಗ್ಗ ಜಿಲ್ಲೆಗೆ ಸೇರಿದ 27 ಮಂದಿ ಪತ್ತೆಯಾಗಿದ್ದರು. ಇದರಲ್ಲಿ 18 ಹೆಂಗಸರು, 8 ಗಂಡಸರು ಹಾಗೂ ಒಬ್ಬ 6 ವರ್ಷದ ಬಾಲಕನೂ ಸೇರಿದ್ದ. ಇವರನ್ನು ವಿಚಾರಣೆ ನಡೆಸಿದ ಪೊಲೀಸರು ಇವರು ಪ್ರಾರ್ಥನಾ ಮಂದಿರಕ್ಕೆ ಸ್ವ-ಇಚ್ಛೆಯಿಂದ ಬಂದಿರುವುದಾಗಿ ಮತ್ತು ಇಲ್ಲಿ ಯಾವುದೇ ಮತಾಂತರ ನಡೆದಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ. ತಾವು ಶಿವಮೊಗ್ಗ ಜಿಲ್ಲೆಯವರು. ತಮ್ಮಲ್ಲಿ ಮದ್ಯಪಾನ ವ್ಯಸನಿಗಳು ಮತ್ತು ಮಾನಸಿಕ ಖಾಯಿಲೆಗೆ ತುತ್ತಾದವರು ಇದ್ದಾರೆ. ಇಲ್ಲಿ ಧ್ಯಾನ ಮಾಡುವುದರಿಂದ ಆರೋಗ್ಯ ಸುಧಾರಣೆ ಸಿಗುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸಿಕ್ಕಿದ್ದು, ಅದನ್ನು ವೀಕ್ಷಿಸಿ ಇಲ್ಲಿಗೆ ಆಗಮಿಸಿದ್ದೇವೆ. ಅಲ್ಲದೇ, ತಾವೇ ತಮ್ಮ ಸ್ವಂತ ಖರ್ಚಿನಲ್ಲಿ ಸರ್ಕಾರಿ ಬಸ್ನಲ್ಲಿ ನೆಲ್ಯಾಡಿಯ ಮೋರಿಯ ಧ್ಯಾನ ಕೇಂದ್ರಕ್ಕೆ ಆಗಮಿಸಿರುವುದಾಗಿಯೂ, ತಮ್ಮನ್ನು ಯಾರೂ ಕೂಡ ಇಲ್ಲಿಗೆ ಬಲವಂತವಾಗಿ ಕರೆದುಕೊಂಡು ಬಂದಿರುವುದಿಲ್ಲ, ತಮ್ಮನ್ನು ಯಾರೂ ಯಾವುದೇ ಮತಾಂತರಕ್ಕೂ ಒಳಪಡಿಸಿರುವುದಿಲ್ಲ ಎಂಬುವುದಾಗಿಯೂ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಬಗೆಹರಿದಿದೆ.
Discover more from Coastal Times Kannada
Subscribe to get the latest posts sent to your email.
Discussion about this post