ಮಂಗಳೂರು, ಆಗಸ್ಟ್ 5: ದೇಶಾದ್ಯಂತ ಹರಡಿಕೊಂಡಿರುವ ಐಸಿಸ್ ನೆಟ್ವರ್ಕ್ ಬಗ್ಗೆ ಎನ್ಐಎ ಅಧಿಕಾರಿಗಳು ಮಹತ್ತರ ಮಾಹಿತಿಗಳನ್ನು ಹೊರಗೆಡವಿದ್ದಾರೆ. ಅಲ್ಲದೆ, ಮುಸ್ಲಿಂ ಆಗಿ ಮತಾಂತರಗೊಂಡು ಕಟ್ಟರ್ ಮೂಲಭೂತವಾದಿಯಾಗಿ ಮಾರ್ಪಟ್ಟಿದ್ದ ಕೊಡಗು ಮೂಲದ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಎನ್ನುವ ಯುವತಿಯೇ ಐಸಿಸ್ ನೆಟ್ವರ್ಕ್ ಪಾಲಿಗೆ ಮಾಸ್ಟರ್ ಮೈಂಡ್ ವ್ಯಕ್ತಿಗಳಲ್ಲಿ ಒಬ್ಬಳಾಗಿದ್ದಳು ಅನ್ನೋ ಮಾಹಿತಿಯನ್ನು ಪತ್ತೆ ಮಾಡಿದ್ದಾರೆ.
ತೀವ್ರವಾದಿ ಗುಂಪುಗಳಲ್ಲಿರುವ ಯುವಕರನ್ನು ದೊಡ್ಡ ಮಟ್ಟದಲ್ಲಿ ಐಸಿಸ್ ನೆಟ್ವರ್ಕ್ ಗೆ ಸೇರ್ಪಡೆ ಮಾಡುವುದು, ಅದಕ್ಕಾಗಿ ಸೈಬರ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು, ಶಸ್ತ್ರಾಸ್ತ್ರ ಮೂಲಕ ಜಿಹಾದಿ ಮಾಡುವುದು, ಹಿಂದು ಸಂಘಟನೆಗಳ ನಾಯಕರನ್ನು ಗುರುತಿಸಿ, ಅವರ ಮೇಲೆ ದಾಳಿ ಮಾಡುವುದು ಇತ್ಯಾದಿ ಕೆಲಸಗಳನ್ನು ಐಸಿಸ್ ಮಾಸ್ಟರ್ ಮೈಂಡ್ ಗಳು ಮಾಡುತ್ತಿದ್ದರು. ಇವೆಲ್ಲ ಕೃತ್ಯಗಳಿಗಾಗಿ ಐಸಿಸ್ ಬಗ್ಗೆ ಮೃದು ಧೋರಣೆ ಹೊಂದಿರುವ ವ್ಯಕ್ತಿಗಳಿಂದ ದೇಣಿಗೆ ಸಂಗ್ರಹಿಸುವ ಕಾರ್ಯವೂ ನಡೆಯುತ್ತಿತ್ತು.
ಬುಧುವಾರ ಬೆಳ್ಳಂಬೆಳಗ್ಗೆ ಮಂಗಳೂರಿನ ಉಳ್ಳಾಲ, ಬೆಂಗಳೂರು, ಜಮ್ಮು ಕಾಶ್ಮೀರದ ಮೂರು ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಪೈಕಿ ಉಳ್ಳಾಲದಲ್ಲಿ ಮಾಜಿ ಶಾಸಕ ಬಿಎಂ ಇದಿನಬ್ಬ ಅವರ ಪುತ್ರ ಬಿಎಂ ಬಾಷಾ ಮನೆಗೆ ದಾಳಿ ನಡೆದಿತ್ತು. ಸಲಫಿ ಪಂಗಡದ ಪ್ರಮುಖ ನಾಯಕರಾಗಿರುವ ಬಿಎಂ ಬಾಷಾ ಅವರ ಸೊಸೆಯೇ ದೀಪ್ತಿ ಅಲಿಯಾಸ್ ಮರಿಯಂ.
ಬಾಷಾ ಮೂರನೇ ಪುತ್ರ ಅನಾಸ್ ನನ್ನು ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ಮರಿಯಂ, ಐಎಸ್ – ಖೊರಾಸಾನ್ ಮತ್ತು ಜಮ್ಮು ಕಾಶ್ಮೀರದ ಉಗ್ರರ ಜೊತೆ ಡೈರೆಕ್ಟ್ ಲಿಂಕ್ ಹೊಂದಿರುವ ಆರೋಪ ಹೊಂದಿದ್ದಾಳೆ. ಮದುವೆಯ ಬಳಿಕ ದುಬೈಗೆ ತೆರಳಿದ್ದ ಮರಿಯಂ ಅಲ್ಲಿ ಷರೀಯತ್ ಕಾನೂನು ಕಲಿತು ಬಂದಿದ್ದಳು. ಅನಾಸ್ ಜೊತೆ ಸೇರಿ ಈಕೆಯೂ ಅಫ್ಘಾನಿಸ್ತಾನದ ಐಸಿಸ್ ಖೊರಸಾನ್ ತೆರಳಲು ಟ್ರೈ ಮಾಡಿದ್ದಳು. ಆನಂತರ ಇಲ್ಲಿಯೇ ಉಳಿದುಕೊಂಡು ಐಸಿಸ್ ನೆಟ್ವರ್ಕಿಗೆ ಯುವಕರನ್ನು ಸೇರ್ಪಡೆ ಮಾಡುವ ಕೃತ್ಯದಲ್ಲಿ ತೊಡಗಿದ್ದಳು. ದೇಶದ ಹಲವೆಡೆ ಬಂಧನಕ್ಕೊಳಗಾಗಿರುವ ಐಸಿಸ್ ನೆಟ್ವರ್ಕ್ ಸಂಬಂಧೀ ಆರೋಪಿಗಳು ಮರಿಯಂ ಹೆಸರು ಹೇಳಿದ್ದರಿಂದ ಆಕೆಯನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಹಲವರನ್ನು ಜಿಹಾದಿ ನಡೆಸಲು ಈಕೆಯೇ ಪ್ರೇರಣೆ ನೀಡಿದ್ದಳು ಎಂದು ವರದಿ ಹೇಳಿದೆ.
ಉಳ್ಳಾಲದಲ್ಲಿ ಬಂಧಿತನಾಗಿರುವ ಮತ್ತೊಬ್ಬ ಯುವಕ ಮೊಹಮ್ಮದ್ ಅಮ್ಮರ್. ಬಿಎಂ ಬಾಷಾ ಅವರ ನಾಲ್ಕು ಗಂಡು ಮಕ್ಕಳಲ್ಲಿ ಕೊನೆಯವ. ಯಾವುದೇ ಕೆಲಸ ಹೊಂದಿರಲಿಲ್ಲ. ಕಂಪ್ಯೂಟರ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಏಕ್ಟಿವ್ ಆಗಿದ್ದ. ಸ್ವತಃ ಐಸಿಸ್ ಸೇರಿ ಅಫ್ಘಾನಿಸ್ತಾನದ ಖೊರಸಾನ್ ನಲ್ಲಿ ಪ್ರಾಣಾರ್ಪಣೆ ಮಾಡಲು ರೆಡಿಯಾಗಿದ್ದ. ಹಿಜ್ರತ್ ಮಾಡಲು ರೆಡಿಯಾಗಿ ಅಫ್ಘಾನಿಸ್ತಾನಕ್ಕೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡಿದ್ದ. ಆದರೆ ಕೊನೆಕ್ಷಣದಲ್ಲಿ ಅಲ್ಲಿಗೆ ತೆರಳದೆ ಉಳಿದುಕೊಂಡಿದ್ದ. ಇದೇ ವೇಳೆ ಜಮ್ಮು ಕಾಶ್ಮೀರ ಶ್ರೀನಗರದಲ್ಲಿ ಬಂಧನ ಆಗಿರುವ ಒಬೈದ್ ಹಮೀದ್ ಅಲಿಯಾಸ್ ಮುವಾಹಿಯಾ ಎಂಬಾತ ಐಸಿಸ್ ಸಂಘರ್ಷದ ನೆಲಕ್ಕೆ ತೆರಳಲು ರೆಡಿಯಾಗಿದ್ದ. ಇನ್ನೊಬ್ಬ ಬಂಧಿತ ಜಮ್ಮು ಕಾಶ್ಮೀರದಲ್ಲಿ ಐಸಿಸ್ ಪರವಾಗಿ ದೇಣಿಗೆ ಸಂಗ್ರಹಿಸುತ್ತಿದ್ದ.
ಹೊಸ ಮಾದರಿಯ ಐಸಿಸ್ ಮಾಡ್ಯೂಲ್:
ಒಂದು ವರ್ಷದ ಹಿಂದೆ ಈ ಹೊಸ ಮಾದರಿಯ ಐಸಿಸ್ ಮಾಡ್ಯೂಲ್ ಬಗ್ಗೆ ಎನ್ಐಎ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಜಗತ್ತಿನಲ್ಲಿ ಐದು ಸಾವಿರ ಸದಸ್ಯರುಳ್ಳ ” ಕ್ರಾನಿಕಲ್ ಫೌಂಡೇಶನ್ ” ಎನ್ನುವ ತೀವ್ರವಾದಿ ಇಸ್ಲಾಮಿಕ್ ಗ್ರೂಪ್ ಒಂದಿದ್ದು (ಇನ್ಸ್ ಟಾ ಗ್ರಾಮ್) ಅದರ ಕಾರ್ಯ ಚಟುವಟಿಕೆ ಬಗ್ಗೆ ನಿಗಾ ಇಟ್ಟಿದ್ದರು. ಅದರಲ್ಲಿ ಮರಿಯಂ ಕೂಡ ನಂಟು ಹೊಂದಿದ್ದಳು ಎನ್ನುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು. ಈ ಬಗ್ಗೆ ಒಂದು ವರ್ಷದಿಂದ ನಿಗಾ ಇಟ್ಟು ಕೇರಳದಲ್ಲಿ ಏಳು ಮಂದಿಯನ್ನು ಕಳೆದ ಮಾರ್ಚ್ ತಿಂಗಳಲ್ಲಿ ಅರೆಸ್ಟ್ ಮಾಡಿದ್ದರು. ಅದರಲ್ಲಿ ಪ್ರಮುಖ ಆರೋಪಿ ಮಲಪ್ಪುರಂ ಜಿಲ್ಲೆಯ ನಿವಾಸಿ ಮೊಹಮ್ಮದ್ ಅಮೀನ್. ಇವರದೇ ಪ್ರತ್ಯೇಕ ನೆಟ್ವರ್ಕ್ ಮಾಡಿಕೊಂಡಿದ್ದು ಅದಕ್ಕೆ ಪಾನ್ – ಇಂಡಿಯಾ ಎಂದು ಹೆಸರಿಟ್ಟಿದ್ದರು. ಕೇರಳದಲ್ಲಿ ಬಂಧಿಸಲ್ಪಟ್ಟಿದ್ದ ಏಳು ಮಂದಿಯಲ್ಲಿ ಇಬ್ಬರು ಮಹಿಳೆಯರು ಎನ್ನುವುದು ವಿಶೇಷ.
Discover more from Coastal Times Kannada
Subscribe to get the latest posts sent to your email.
Discussion about this post