ಉಡುಪಿ, ಆ 06 : ಉಡುಪಿ ಜಿಲ್ಲಾ ನ್ಯಾಯಾಧೀಶೆಯಾಗಿ ಮಮ್ರಾಝ್ ಅವರು ನೂತನವಾಗಿ ನೇಮಕಗೊಂಡಿದ್ದಾರೆ. ಇವರು ಉಡುಪಿ ಕಾನೂನು ಅಧಿಕಾರಿ ಕಿರಿಯ/ಎಡಿಪಿ ಆಗಿದ್ದರು.
ಫ್ರೆಬವರಿ- ಮಾರ್ಚ್‌ನಲ್ಲಿ ನ್ಯಾಯಾಧೀಶ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದ 12 ಮಂದಿಯಲ್ಲಿ ಇವರು ರಾಜ್ಯದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದ ಕರ್ನಾಟಕ ರಾಜ್ಯದ ಮೊದಲ ಮುಸ್ಲಿಮ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮುಲ್ಕಿ ಮೂಲದ ಅತಿಜಮ್ಮ ಹಾಗೂ ಅಬ್ದುಲ್ ರಹಿಮಾನ್ ದಂಪತಿಯ ಪುತ್ರಿಯಾಗಿರುವ ಇವರು, ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪುನರೂರು ಭಾರತ್ ಮಾತಾ ಶಾಲೆ, ಪಿಯುಸಿ ಶಿಕ್ಷಣವನ್ನು ಐಕಲ ಪೊಂಪೈ ಕಾಲೇಜು, ಎಲ್‌ಎಲ್‌ಬಿಯನ್ನು ಮಂಗಳೂರು ಎಸ್‌ಡಿಎಂ ಕಾನೂನು ವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಅದೇ ರೀತಿ ಮೈಸೂರು ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಇವರು ಪಡೆದಿದ್ದಾರೆ.
2010ರಲ್ಲಿ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಆಯ್ಕೆಯಾದ ಇವರು ಬಳಿಕ ಉಡುಪಿ ಜೆಎಂಎಫ್ ಕೋರ್ಟ್‌ಗೆ ವರ್ಗಾವಣೆಗೊಂಡರು. 2018ರಲ್ಲಿ ಇವರು ಉಡುಪಿ ಜಿಲ್ಲಾ ಎಸ್‌ಪಿ ಕಚೇರಿಗೆ ಎಡಿಪಿಯಾಗಿ ಭಡ್ತಿ ಹೊಂದಿದರು.