ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪೂರ್ಣಗೊಳ್ಳಲು ಮೂರು ದಿನಗಳು ಮಾತ್ರ ಬಾಕಿಯಿದ್ದು, ಈವರೆಗೆ ಪ್ರಕ್ರಿಯೆಯಲ್ಲಿ ಭಾಗವಹಿಸದವರು ಆಗಸ್ಟ್ 8ರೊಳಗೆ ಗಣತಿ ನಮೂನೆ ಅರ್ಜಿ ಪಡೆದು ಬಿಎಲ್ಎಗಳಿಗೆ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಬುಧವಾರ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಜೂನ್ 30ರಿಂದ ಆಗಸ್ಟ್ 8ರವರೆಗೆ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. 5.54 ಕೋಟಿ ಮತದಾರರಿಗೆ ನೀಡಲಾಗಿದ್ದ ಅರ್ಜಿ ನಮೂನೆ ಎಎಸ್‌ಡಿಡಿಒ (ಅನುಮಾನಾಸ್ಪದ/ಸ್ಥಳಾಂತರಗೊಂಡ/ಮೃತ/ದ್ವಿಪ್ರತಿ) ಒಳಗೊಂಡಂತೆ ನಾಳೆ(ಗುರುವಾರ)ಯೊಳಗೆ ಶೇಕಡ 100ರಷ್ಟು ಡಿಜಿಟಲಿಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 22,977 ಮತದಾರರು ಪಡೆದಿದ್ದ ಅರ್ಜಿ ವಾಪಸ್ ನೀಡಿಲ್ಲ. ಆಗಸ್ಟ್ 8ರೊಳಗೆ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮಾಧ್ಯಮಗೋಷ್ಟಿಯಲ್ಲಿ ಮನವಿ ಮಾಡಿದ್ದಾರೆ.
ಸಹಿಗೆ ನಿರಾಕರಿಸಿದ 4.88 ಲಕ್ಷ ಮತದಾರರು: ರಾಜ್ಯದಲ್ಲಿ 1.11 ಕೋಟಿ ಎಸ್ಡಿಡಿಒ ಮತದಾರರು ಪತ್ತೆಯಾಗಿದ್ದಾರೆ. ಶಾಶ್ವತವಾಗಿ ಸ್ಥಳಾಂತರಗೊಂಡವರು 66.64 ಲಕ್ಷ, ಮೃತಪಟ್ಟವರು 16.30 ಲಕ್ಷ, ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವವರು 6.89 ಲಕ್ಷ ಹಾಗೂ ಸಹಿಗೆ ನಿರಾಕರಿಸಿದ ಮತದಾರರು 4.88 ಲಕ್ಷ ಜನರು ಇದ್ದಾರೆ. ಈ ಪೈಕಿ 49 ಲಕ್ಷ ಮಂದಿ ಬೆಂಗಳೂರಿನವರೇ ಆಗಿದ್ದಾರೆ. ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಬಿಎಲ್ಒಗಳು, ಸೂಪರ್ವೈಸರ್ಗಳ ಸಹಾಯದಿಂದ ನಿಗದಿತ ಅವಧಿಯೊಳಗೆ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲು ಸಹಕರಿಸಿದವರಿಗೆ ಚುನಾವಣಾಧಿಕಾರಿ ಧನ್ಯವಾದ ಅರ್ಪಿಸಿದ್ದಾರೆ.
ಬಿಎಲ್ಗಒಳು ಎಎಸ್‌ಡಿಡಿಒ ಮತದಾರರ ವಿವರವನ್ನು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳಿಗೆ (ಬಿಎಲ್‌ಎ) ಈಗಾಗಲೇ ಕೊಟ್ಟಿದ್ದಾರೆ. ಎಎಸ್‌ಡಿಡಿಒ ಮತದಾರರ ಪಟ್ಟಿಯು ಬಿಎಲ್‌ಒಗಳ ಬಳಿ ಲಭ್ಯವಿದ್ದು, ಅರ್ಹ ಮತದಾರರಿಗೆ ಯಾವುದೇ ಗೊಂದಲವಿದ್ದರೆ ಈ ಪಟ್ಟಿ ಪರಿಶೀಲಿಸಬಹುದು. ಆಗಸ್ಟ್ 17ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಆ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಬಿಟ್ಟು ಹೋಗಿದ್ದರೆ ಫಾರ್ಮ್-6ರ ಜೊತೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಅಂತಿಮ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಹೆಸರು ಸೇರಿಸಲು ಹಾಗೂ ತಿದ್ದುಪಡಿ ಮಾಡಲು ಈವರೆಗೂ 12.20 ಲಕ್ಷ ಮತದಾರರು ಅರ್ಜಿ ಸಲ್ಲಿಸಿದ್ದಾರೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.
ಸದ್ಯದ ಎಸ್ಐಆರ್ ಮಾಹಿತಿ:
ಒಟ್ಟು ಮತದಾರರ ಸಂಖ್ಯೆ – 5,54,32,314
ಎಸ್ಡಿಡಿಒ ಒಟ್ಟು ಮತದಾರರು – 1,11,04,705
ನಾಪತ್ತೆಯಾದವರು – 66,64,943
ಶಾಶ್ವತವಾಗಿ ಸ್ಥಳಾಂತರವಾದವರು – 66,64,943
ಮೃತಪಟ್ಟವರು – 16,30,872
ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವವರು – 6,89,904
ಗಣತಿ ನಮೂನೆಗೆ ಸಹಿ ಹಾಕದವರು – 4,88,974
Discover more from Coastal Times Kannada
Subscribe to get the latest posts sent to your email.







Discussion about this post