ಮಂಗಳೂರು. ಅ.5 : “ಸಾಹಿತ್ಯ ಸಮ್ಮೇಳನಗಳು ಭಾಷೆ ಮತ್ತು ಸಾಹಿತ್ಯದ ವೈವಿಧ್ಯತೆಯನ್ನು ಸಂಭ್ರಮಿಸುವ ಹಬ್ಬಗಳಾಗಿದ್ದು, 1939 ರಲ್ಲಿ ಕುಮಟಾದ ವಕೀಲ ಮಾಧವ ಮಂಜುನಾಥ ಶಾನುಭಾಗರ ದೂರದೃಷ್ಟಿಯ ಫಲಶೃತಿ ಅಖಿಲ ಭಾರತ ಕೊಂಕಣಿ ಪರಿಷತ್ ಈ ವರೆಗೆ ದೇಶದ ನಾನಾ ಭಾಗಗಳಲ್ಲಿ 24 ರಾಷ್ಟ್ರ ಮಟ್ಟದ ಕೊಂಕಣಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದು, 2023 ನವೆಂಬರ್ 4 – 5 ಎರಡು ದಿನ, ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 800 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ವಿನಾಯತಿ ನೀಡಲಾಗಿದೆ.
ಪ್ರತಿನಿಧಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದ್ದು ಒನ್‌ಲೈನ್ ಮೂಲಕ ನೋಂದಣಿ ಆರಂಭಿಸಲಾಗಿದೆ. ” ಎಂದು 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಂಕಣಿ ಕವಿ, ಚಿಂತಕ, ರಾಹುಲ್ ಎಡ್ವಟೈಸರ್ಸ್ ಮಾಲಕ ಟೈಟಸ್ ನೊರೊನ್ಹಾ ಮಾಹಿತಿ ನೀಡಿದರು.
25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯ ಸಂಚಾಲಕ ಖ್ಯಾತ ಕಲಾವಿದ ಪಿಂಟೊ ವಾಮಂಜೂರ್ ಸಮ್ಮೇಳನದ ಲಾಂಛನವನ್ನು ತಯಾರಿಸಿದ್ದಾರೆ.
ಹಿರಿಯ ಪತ್ರಕರ್ತ, 1974 ರಲ್ಲಿ ಕರ್ನಾಟಕದಲ್ಲಿ ಕೊಂಕಣಿ ಭಾಷಾ ಮಂಡಳದ ಸ್ಥಾಪನೆಗಾಗಿ ಶ್ರಮಿಸಿದ, ಶ್ರೀಮತಿ ವಿಮಲಾ ವಿ. ಪೈ ಜೀವನ ಸಿದ್ದಿ ಪ್ರಶಸ್ತಿ ಪುರಸ್ಕೃತ, ರಾಕ್ಕೊ ಪತ್ರಿಕೆಯ ವಿಶ್ರಾಂತ ಸಂಪಾದಕ ಫಾ| ಮಾರ್ಕ್ ವಾಲ್ಡರ್ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದರು.
ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ನೊ) ಅಧ್ಯಕ್ಷ ಅಲ್ವಿನ್ ಡಿ’ಸೋಜಾ, ಪಾನೀರ್ ಕ್ಯೂ ಆರ್ ಕೋಡ್ ಮೂಲಕ ಒನ್‌ಲೈನ್ ನೋಂದಣಿಗೆ ವಿಧ್ಯುಕ್ತ ಚಾಲನೆ ನೀಡಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಗೋಕುಲದಾಸ ಪ್ರಭು ನೋಂದಣಿ ಪುಸ್ತಕ ಬಿಡುಗಡೆ ಮಾಡಿದರು. ಅಖಿಲ ಭಾರತ ಕೊಂಕಣಿ ಪರಿಷತ್ ಅಧ್ಯಕ್ಷ ಅರುಣ್ ಉಭಯ್‌ಕರ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಪತ್ರಕರ್ತ ಎಚ್. ಎಂ. ಪೆರ್ನಾಲ್ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು. ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೊಂಕಣಿ ಭಾಷಾ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಬಂಟ್ವಾಳ್‌ಕರ್ ವಂದಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post