ಮಂಗಳೂರು: ಯುವ ನಿರ್ದೇಶಕ ಅಭಿಷೇಕ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದಿಲ್ ರಂಗ್ 1’ ತುಳು ಆಲ್ಬಂ ಸಾಂಗ್ ಅನ್ನು ಯೂಟ್ಯೂಬ್’ನಲ್ಲಿ 2.6 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಇದೀಗ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ‘ದಿಲ್ ರಂಗ್ 2′ ಇಂದು ನಗರದ ಪುರಭವನದಲ್ಲಿ 5 ಗಂಟೆಗೆ ಬಿಡುಗಡೆ ಆಗಲಿದೆ.
‘ದಿಲ್ ರಂಗ್ 2’ ಸಿನಿಮಾ ತಂದೆ-ಮಗಳ ಬಾಂಧವ್ಯದ ಕಥಾಹಂದರವನ್ನು ಹೊಂದಿದ್ದು, ಪ್ರೀತಿಯ ಸೆಳೆತಕ್ಕೆ ಸಿಕ್ಕ ಮಗಳಿಗೆ ತಂದೆಯ ಪ್ರೀತಿ ದೊಡ್ಡದೇ ಅಥವಾ ಪ್ರಿಯತಮನ ಪ್ರೀತಿ ಮುಖ್ಯವೇ ಎಂಬ ತೊಳಲಾಟದ ಕಥಾನಕವನ್ನು ಹೊಂದಿದೆ. ಸುಮಾರು 6 ಲಕ್ಷಕ್ಕೂ ಅಧಿಕ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ ಎನ್ನುತ್ತಾರೆ ನಿರ್ದೇಶಕ ಅಭಿಷೇಕ್ ರಾವ್.
ವಿಜಿತ್ ಕೋಟ್ಯಾನ್ ಎಂಬ ನಟನನ್ನು ಈ ಸಿನಿಮಾ ಮೂಲಕ ನಿರ್ದೇಶಕರು ತೆರೆಗೆ ಹೊಸದಾಗಿ ಪರಿಚಯಿಸಿದ್ದಾರೆ. ನಾಯಕಿಯಾಗಿ ಸಮತಾ ಅಮಿನ್ ನಟಿಸಿದ್ದಾರೆ.
ಸುಮಾರು 40 ನಿಮಿಷಗಳ ಅವಧಿಯ ‘ದಿಲ್ ರಂಗ್ 2’ ಸಿನಿಮಾವು ಪುರಭವನದಲ್ಲಿ ಒಟ್ಟು ಮೂರು ಬಾರಿ ಪ್ರದರ್ಶನ ಕಾಣಲಿದೆ. ಸಂಜೆ 5, 6, ಹಾಗೂ 7 ಗಂಟೆಗೆ ಮೂರು ಬಾರಿ ಸಿನಿಮಾವನ್ನು ಪ್ರದರ್ಶಿಸಲಾಗುತ್ತದೆ. ಸಿನಿಮಾ ವೀಕ್ಷಣೆಗೆ 99 ರೂ. ಟಿಕೆಟ್ ದರ ಇರಿಸಲಾಗಿದ್ದು, ಈಗಾಗಲೇ 75 ಪ್ರತಿಶತ ಟಿಕೆಟ್’ಗಳು ಮಾರಾಟ ಆಗಿವೆ.
ಚಿತ್ರಕ್ಕೆ ಶ್ರೀಧರ್ ಕರ್ಕೇರಾ ಅವರ ಸಂಗೀತವಿದ್ದು, ರಚಿನ್ ಶೆಟ್ಟಿ ಹಾಗೂ ಪ್ರಜ್ವಲ್ ಸುವರ್ಣ ಛಾಯಾಗ್ರಹಣ ಮಾಡಿದ್ದಾರೆ. ಜೊತೆಗೆ ಸಿನಿಮಾದ ಹಾಡುಗಳು ಮುಂದಿನ ದಿನಗಳಲ್ಲಿ ತೆಲುಗು, ತಮಿಳು, ಕುಂದಾಪುರ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿ ಬರಲಿದೆ ಎಂದು ತಿಳಿದುಬಂದಿದೆ.