ಮಂಗಳೂರು, ಸೆ.5: ತಾವು ದಂಪತಿಯೆಂದು ಬಾಡಿಗೆ ಮನೆ ಪಡೆದು ಪ್ರಿಯತಮೆಯನ್ನೇ ಕುತ್ತಿಗೆ ಕೊಲೆಗೈದಿದ್ದ ವಿಜಯಪುರ ಮೂಲದ ಪ್ರಿಯಕರನಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟ್ಗಿ ತಾಂಡಾ ನಿವಾಸಿ ಸಂದೀಪ್ ರಾಥೋಡ್ (28) ಶಿಕ್ಷೆಗೊಳಗಾದ ಯುವಕ.
2019ರ ಜೂನ್ 7ರಂದು ಮಂಗಳೂರಿನ ಅತ್ತಾವರದ ಪಾಯಸ್ ಕಾಟೇಜಿನ ಮೊದಲ ಮಹಡಿಯಲ್ಲಿ ಯುವತಿ ಕೊಲೆಯಾಗಿತ್ತು. ಪಾಂಡೇಶ್ವರ ಪೊಲೀಸರು ತನಿಖೆ ನಡೆಸಿದಾಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ನಿವಾಸಿ ಅಂಜನಾ ವಸಿಷ್ಠ (22) ಕೊಲೆಯಾದವಳು ಅನ್ನೋದು ತಿಳಿದುಬಂದಿತ್ತು. ತನಿಖೆ ನಡೆಸಿದಾಗ, ಆರೋಪಿ ಸಂದೀಪ್ ರಾಥೋಡ್ ಕೊಲೆಗೈದು ಪರಾರಿಯಾಗಿರುವುದು ತಿಳಿದುಬಂದಿತ್ತು. ಮನೆಯ ಮಾಲೀಕರಲ್ಲಿ ತಾವು ದಂಪತಿಯೆಂದು ಇವರು ಮನೆ ಬಾಡಿಗೆ ಪಡೆದು ನೆಲೆಸಿದ್ದರು.
ಅಂಜನಾ ಮತ್ತು ಸಂದೀಪ್ ರಾಥೋಡ್ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದು, ಪ್ರೀತಿ ನೆಪದಲ್ಲಿ ಗೆಳೆಯರಾಗಿದ್ದರು. ಸ್ನೇಹಿತರಾಗಿದ್ದು ಉದ್ಯೋಗ ಪಡೆದ ಬಳಿಕ ಮನದುವೆಯಾಗಲು ಬಯಸಿದ್ದರು. ಸಂದೀಪ್ ರಾಥೋಡ್ ಮಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದು ಪಿಎಸ್ಐ ಪರೀಕ್ಷೆ ಬರೆಯಲು ರೆಡಿ ಮಾಡಿಕೊಂಡಿದ್ದ. ತನ್ನ ಗೆಳತಿಯನ್ನೂ ಜೊತೆಗೆ ಕರೆತಂದು ತಾವು ದಂಪತಿಯೆಂದು ಹೇಳಿ ಅತ್ತಾವರದಲ್ಲಿ ನೆಲೆಸಿದ್ದರು. ಈ ನಡುವೆ, ತನ್ನ ಊರಿಗೆ ತೆರಳಿದ್ದ ಅಂಜನಾಗೆ ಮನೆಯವರು ಬೇರೆ ಹುಡುಗನನ್ನು ನೋಡಿ ಮದುವೆ ಮಾಡಲು ಮುಂದಾಗಿದ್ದರು. ಈ ಸಂಬಂಧಕ್ಕೆ ಯುವತಿಯೂ ಒಪ್ಪಿದ್ದು, ಮನೆಯವರಲ್ಲಿ ಮದುವೆಗೆ ಸಿದ್ಧತೆ ಮಾಡುವಂತೆ ಹೇಳಿ ಬಂದಿದ್ದಳು.
ಮಂಗಳೂರಿಗೆ ಹಿಂತಿರುಗಿದ ಬಳಿಕ ತನ್ನ ಸ್ನೇಹಿತನಿಗೆ ವಿಷಯ ತಿಳಿಸಿದ್ದು, ತನ್ನನ್ನು ಮರೆತು ಬಿಡುವಂತೆ ಕೇಳಿಕೊಂಡಿದ್ದಳು. ಇದರಿಂದ ಸಿಟ್ಟಾಗಿದ್ದ ಸಂದೀಪ್, ಆಕೆಯನ್ನು ತನ್ನ ಕೊಠಡಿಯಲ್ಲೇ ಟಿವಿ ಕೇಬಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಆನಂತರ, ಆಕೆಯ ಎಟಿಎಂ ಕಾರ್ಡ್ ಪಡೆದು ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎಟಿಎಂನಿಂದ 15 ಸಾವಿರ ಹಣ ಪಡೆದು ತನ್ನ ಊರಿಗೆ ತೆರಳಿದ್ದ. ಪಾಂಡೇಶ್ವರ ಠಾಣೆಯ ಆಗಿನ ಇನ್ಸ್ ಪೆಕ್ಟರ್ ಎಂ. ಕುಮಾರ್ ಆರಾಧ್ಯ ಮತ್ತು ಪಿಎಸ್ಐ ರಾಜೇಂದ್ರ ತನಿಖೆ ನಡೆಸಿ ಆರೋಪಿಯನ್ನು ಸಿಂದಗಿಯಿಂದಲೇ ಅರೆಸ್ಟ್ ಮಾಡಿ ತಂದಿದ್ದರು. ಆನಂತರ, ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಲ್ಲಿ 45 ಸಾಕ್ಷಿಗಳನ್ನು ಗುರುತಿಸಿ, 100 ಪುಟದ ದಾಖಲೆಗಳನ್ನು ಪೊಲೀಸರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಆರೋಪ ಸಾಬೀತಾಗಿದ್ದು ಎಂದು ತೀರ್ಪು ನೀಡಿದ್ದು ಶಿಕ್ಷೆ ಘೋಷಣೆ ಮಾಡಿದ್ದಾರೆ.
ಭಾರತೀಯ ದಂಡ ಸಂಹಿತೆ 302 ಪ್ರಕಾರ ಜೀವಾವಧಿ ಶಿಕ್ಷೆ, 25 ಸಾವಿರ ದಂಡ, 380ರ ಅಪರಾಧಕ್ಕೆ ಮೂರು ತಿಂಗಳ ಸಜೆ, ಒಂದು ಸಾವಿರ ದಂಡ, 403ರ ಅಪರಾಧಕ್ಕೆ ಮೂರು ತಿಂಗಳ ಸಜೆ, 500 ರೂ. ದಂಡ ನೀಡುವಂತೆ ಆದೇಶ ನೀಡಿದ್ದಾರೆ. ದಂಡದ ಮೊತ್ತವನ್ನು ಮೃತಳ ಮನೆಯವರಿಗೆ ನೀಡುವಂತೆ ಆದೇಶ ಮಾಡಿದ್ದಾರೆ. ಸರಕಾರದ ಪರವಾಗಿ ನಿವೃತ್ತ ಸರಕಾರಿ ಅಭಿಯೋಜಕ ಬಿ. ಶೇಖರ್ ಶೆಟ್ಟಿ ವಾದಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post