ತಿರುವನಂತಪುರಂ: ಮನೆಯೊಳಗೆ ನುಗ್ಗುತ್ತಿದ್ದ ನಾಗರಹಾವೊಂದನ್ನು ಅರಣ್ಯ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ಹಿಡಿದು ರಕ್ಷಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇತ್ತೀಚಿಗೆ ಕಟ್ಟಕಡದ ಜನವಸತಿ ಪ್ರದೇಶದಲ್ಲಿ ಮನೆಯೊಂದಕ್ಕೆ ನುಗುತ್ತಿದ್ದ ನಾಗರಹಾವೊಂದನ್ನು ಧೈರ್ಯಶೀಲ ಅರಣ್ಯ ಸಿಬ್ಬಂದಿ ರೋಶಿನಿ ಹಿಡಿದು ಬ್ಯಾಗ್ ನೊಳಗೆ ಬಿಡುವ ಮೂಲಕ ರಕ್ಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್ ಆಗಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಐಎಫ್ಎಸ್ ಅಧಿಕಾರಿ ಸುಧಾ ರಾಮನ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಧೈರ್ಯ ಶಾಲಿ ಅರಣ್ಯ ಸಿಬ್ಬಂದಿ ರೋಶಿನಿ ಜನವಸತಿ ಪ್ರದೇಶದಲ್ಲಿ ಹಾವನ್ನು ರಕ್ಷಿಸಿದ್ದಾರೆ. ಇವರು ಹಾವುಗಳನ್ನು ರಕ್ಷಿಸುವಲ್ಲಿ ತರಬೇತಿ ಪಡೆದಿದ್ದಾರೆ. ದೇಶಾದ್ಯಂತ ಅರಣ್ಯ ಇಲಾಖೆಗಳಲ್ಲಿ ಮಹಿಳಾ ಪಡೆ ಉತ್ತಮ ಸಂಖ್ಯೆಯಲ್ಲಿ ಬೆಳೆಯುತ್ತಿದೆ ಎಂದು ಸುಧಾ ರಾಮನ್ ಖುಷಿ ವ್ಯಕ್ತಪಡಿಸಿದ್ದಾರೆ.