ವಿಟ್ಲ: ಕರ್ಣಾಟಕ ಬ್ಯಾಂಕಿನ ಅಡ್ಯನಡ್ಕ ಶಾಖೆಯಲ್ಲಿ ಗುರುವಾರ ಭಾರೀ ಕಳ್ಳತನ ನಡೆದಿದ್ದು, ಕೋಟ್ಯಾಂತರ ರೂ. ಮೌಲ್ಯದ ನಗ- ನಗದನ್ನು ದೋಚಿದ ಘಟನೆ ನಡೆದಿದೆ. ಸುಮಾರು 2 -3 ಕೋಟಿ ರೂ. ನಗದು ಮತ್ತು ಬಂಗಾರ ಕಳ್ಳರ ಪಾಲಾಗಿದೆ. ಕೃತ್ಯವು ಫೆ. 7ರ ಬುಧವಾರ ರಾತ್ರಿ 2.30 ರಿಂದ ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕೇರಳ- ಕರ್ನಾಟಕ ಗಡಿಭಾಗದ ಅಡ್ಯನಡ್ಕದಲ್ಲಿ ಹಳೆ ಕಟ್ಟಡದಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದಾರೆ. ಹಿಂಭಾಗದ ಕಿಟಕಿಯ ಸರಳನ್ನು ಕತ್ತರಿಸಿ ಕಳ್ಳರು ಒಳನುಗ್ಗಿದ್ದು ಲಾಕರ್ ಒಡೆದು ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ. ಲಾಕರನ್ನು ಗ್ಯಾಸ್ ಕಟ್ಟರ್ ಬಳಸಿ ಒಡೆದಿರುವುದು ಕಂಡುಬಂದಿದೆ.
ಬ್ಯಾಂಕ್ ಸಿಬಂದಿ ಇಂದು ಬೆಳಗ್ಗೆ 9.30ಕ್ಕೆ ಕೆಲಸಕ್ಕೆ ಆಗಮಿಸಿದಾಗ, ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ವಿಟ್ಲ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್ ಶಾಖೆಯನ್ನು ಸದ್ಯಕ್ಕೆ ಮುಚ್ಚಲಾಗಿದೆ. ಕಟ್ಟಡದ ಹಿಂಭಾಗದಲ್ಲಿ ಪೊದೆ ಆವರಿಸಿದ್ದು ಅದೇ ಜಾಗದಿಂದ ಕಳ್ಳರು ಕನ್ನ ಹಾಕಿರುವುದು ಯಾರಿಗೂ ಗೊತ್ತಾಗಿಲ್ಲ. ನಸುಕಿನ ಜಾವದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ ನಡೆದಿರುವ ಶಂಕೆಯಿದೆ. ಹಿಂಭಾಗದಲ್ಲಿ ಸಿಸಿಟಿವಿ ಇಲ್ಲದಿರುವುದು ಕಳ್ಳರಿಗೆ ವರದಾನವಾಗಿತ್ತು. ಲಾಕರಿನಲ್ಲಿ ಎರಡು ಕೋಟಿಯಷ್ಟು ಮೌಲ್ಯದ ಚಿನ್ನಾಭರಣ ಇದ್ದಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಕಟ್ಟಡದ ಬಗ್ಗೆ ತಿಳಿದವರೇ ಕೃತ್ಯ ಎಸಗಿರುವ ಶಂಕೆಯಿದ್ದು ಬಂಟ್ವಾಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Discussion about this post