ಮಂಗಳೂರು: ನಗರದ ಕುದ್ರೋಳಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಯೊಂದು ನಡೆಯುತ್ತಿರುವ ಆರೋಪದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಅವರು ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿದರು.
ನ್ಯಾಯಾಲಯದ ಆದೇಶದಂತೆ ಮಂಗಳೂರಿನ ಕುದ್ರೋಳಿಯಲ್ಲಿರುವ ಕಸಾಯಿಖಾನೆ ಸ್ಥಗಿತವಾಗಿ 4 ವರ್ಷ ಕಳೆದಿದ್ದರೂ ಅದರ ಪಕ್ಕದಲ್ಲಿ ಖಾಸಗಿ ಜಾಗದಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ಜಾನುವಾರು ವಧೆ ನಡೆಯು ತ್ತಿರುವುದು ಮೇಯರ್ ತಂಡ ಭೇಟಿ ನೀಡಿದಾಗ ಕಂಡುಬಂದಿದೆ. ಇಲ್ಲಿ ಅಕ್ರಮವಾಗಿ ಜಾನುವಾರುಗಳ ವಧೆ ಮಾಡುತ್ತಿರುವ ಬಗ್ಗೆ ಮೇಯರ್ ಫೋನ್ ಇನ್‌ನಲ್ಲಿ ಬಂದ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿದ ಮೇಯರ್, ಈ ಸಂಬಂಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಳಕೆಯ ಕಸಾಯಿಖಾನೆಗೆ ಮೇಯರ್ ಭೇಟಿ ನೀಡಿದಾಗ ಜಾನುವಾರು ವಧೆ ಮಾಡುವ ಬಗ್ಗೆ ಯಾವುದೇ ಕುರುಹು ಎದುರು ಭಾಗದಲ್ಲಿ ಕಾಣಲಿಲ್ಲ. ಆದರೆ ಪಕ್ಕದ ಖಾಸಗಿ ಜಾಗದಲ್ಲಿರುವ ಕಟ್ಟಡವನ್ನು ಪರಿಶೀಲಿಸಿದಾಗ ಅಲ್ಲಿ ವಿವಿಧ ಪ್ರಾಣಿಗಳ ನೂರಾರು ರುಂಡಗಳು, ದೇಹದ ಭಾಗಗಳು ಕೋಣೆಯಿಡೀ ಇರುವುದು ಗಮನಕ್ಕೆ ಬಂದಿತ್ತು.
ಖಾಸಗಿ ಜಾಗದ ಮುಂಭಾಗದ ಕಟ್ಟಡದ ತೆರೆದಿತ್ತು. ಅದರ ಹಿಂಭಾಗದ ಕಟ್ಟಡಕ್ಕೆ ಮಾತ್ರ ಬೀಗ ಹಾಕಲಾಗಿತ್ತು. ಬೀಗ ತೆಗೆಯಲು ಸ್ಥಳದಲ್ಲಿದ್ದ ಅಧಿಕಾರಿಗಳು / ಪ್ರಮುಖರಲ್ಲಿ ಮೇಯರ್ ಹೇಳಿದಾಗ ಯಾರೂ ಪ್ರತಿಕ್ರಿಯಿಸಲಿಲ್ಲ. ಸಿಟ್ಟಾದ ಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಮನೋಹರ್ ಶೆಟ್ಟಿ ಅವರೇ ಸ್ವತಃ ಕಲ್ಲು ತಂದು ಬೀಗ ಮುರಿದು ಒಳಗೆ ಹೋದರು. ಅಲ್ಲಿ ಜಾನುವಾರು ವಧೆ ಮಾಡುವ ಸ್ಥಳ, ತೂಕ ಮಾಪಕ ಇರುವುದು ಕಂಡುಬಂತು. ಪರಿಸರವಿಡೀ ದುರ್ವಾಸನೆಯಿಂದ ಕೂಡಿತ್ತು. ಎಗ್ಗಿಲ್ಲದೆ ಅಕ್ರಮವಾಗಿ ಕಸಾಯಿಖಾನೆ ನಡೆಯುತ್ತಿದ್ದರೂ ಇಲ್ಲಿಯವರೆಗೆ ಏನು ಮಾಡುತ್ತಿದ್ದಿರೆ ಎಂದು ಪಾಲಿಕೆ ಅಧಿಕಾರಿಗಳನ್ನು ಮೇಯರ್ ತರಾಟೆಗೆ ತೆಗೆದುಕೊಂಡರು.
ಸುದ್ದಿಗಾರರ ಜತೆ ಮಾತನಾಡಿದ ಮೇಯರ್, “ಕುದ್ರೋಳಿ ಬಳಿ ಅಕ್ರಮ ಕಸಾಯಿಖಾನೆ ಕಟ್ಟಡ ಬೆಳಕಿಗೆ ಬಂದಿದೆ. ಗೋವು ಸಹಿತ ಕುರಿ ವಧೆ ಮಾಡುತ್ತಿರುವುದು ಪತ್ತೆ ಹಚ್ಚಲಾಗಿದೆ. ಅನಧಿಕೃತ ಕಟ್ಟಡ ವನ್ನು ತೆರವು ಮಾಡಿ, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕುದ್ರೋಳಿ ಕಸಾಯಿ ಖಾನೆ ಸ್ಥಗಿತಗೊಂಡ ಬಳಿಕ ಹಳೆ ಕಟ್ಟಡದಲ್ಲಿ ಜಾನುವಾರು ವಧೆ ನಡೆಯುತ್ತಿಲ್ಲ. ಹಸುರು ಪೀಠ ಮಾರ್ಗ ಸೂಚಿಯಂತೆ ನೂತನ ಕಟ್ಟಡ ವನ್ನು ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಉಪಮೇಯರ್ ಭಾನುಮತಿ, ಪಟ್ಟಣ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಮಂಗಳ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮಿತ್ರಾ ಕರಿಯ, ಮನಪಾ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ಮತ್ತಿತರರು ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post