ಮಂಗಳೂರು: ಕುಟುಂಬದಲ್ಲಿ ದುಡಿಯುವ ಜೀವಗಳನ್ನು ಕಳೆದುಕೊಂಡರೆ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಾಗಿ, ಪ್ರತಿಯೊಬ್ಬರಿಗೂ ಆರ್ಥಿಕ ನಿರ್ವಹಣೆ ಹಾಗೂ ತೆರಿಗೆ ಸಾಕ್ಷರತೆಯ ಅರಿವು ಮೂಡಿಸುವ ಅಗತ್ಯವಿದೆ ಎಂದು ಭಾರತೀಯ ಲೆಕ್ಕಪರಿಶೋಧಕ ಸಂಘದ ಕೇಂದ್ರ ಸಮಿತಿ ಸದಸ್ಯ ಕೋಥಾ ಶ್ರೀನಿವಾಸ್ ಹೇಳಿದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಘದ (ಐಸಿಎಐ) ಮಂಗಳೂರು ಶಾಖೆಯ ವತಿಯಿಂದ ಮಂಗಳವಾರದಿಂದ ಎರಡು ದಿನ ಇಲ್ಲಿನ ಟಿಎಂಎ ಪೈ ಸಭಾಭವನದಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ‘ಪರಿಜ್ಞಾನ’ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರತಿ ಕುಟುಂಬವು ಆರ್ಥಿಕ ನಿರ್ವಹಣೆ, ಉಳಿತಾಯದ ಬಗ್ಗೆ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳಬೇಕು. ಆಗ ಕಷ್ಟಗಳು ಎದುರಾದರೂ ಸಮರ್ಥವಾಗಿ ಎದುರಿಸಬಹುದು. ಲೆಕ್ಕ ಪರಿಶೋಧಕರು ಜನರಲ್ಲಿ ಆರ್ಥಿಕ ಸಾಕ್ಷರತೆಯ ಅರಿವು ಮೂಡಿಸಬೇಕು ಎಂದರು.
ರಾಷ್ಟ್ರೀಕೃತ ಬ್ಯಾಂಕ್‍ಗಳ ವಿಲೀನದ ಬಿಸಿ ಲೆಕ್ಕ ಪರಿಶೋಧನಾ ಕ್ಷೇತ್ರಕ್ಕೂ ತಟ್ಟಿದೆ. ಇದರಿಂದ ಲೆಕ್ಕಪರಿಶೋಧಕರ ಬೇಡಿಕೆ ಕೊಂಚ ತಗ್ಗಿದೆ. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಲೆಕ್ಕ ಪರಿಶೋಧನಾ ಕೋರ್ಸ್‍ಗಳಲ್ಲಿ ಪಠ್ಯದ ಸಂಖ್ಯೆ 8ರಿಂದ 6ಕ್ಕೆ ಇಳಿಕೆಯಾಗಿದೆ. ಇದು ಕೂಡ ಲೆಕ್ಕ ಪರಿಶೋಧಕ ಶಿಕ್ಷಣಕ್ಕೆ ಸವಾಲಾಗಿ ಪರಿಣಮಿಸಿದೆ. ಲೆಕ್ಕ ಪರಿಶೋಧಕರಿಗೆ ಸಂಬಂಧಿಸಿದ ಸರ್ಟಿಫಿಕೆಟ್ ಕೋರ್ಸ್‌ಗೆ ಶೇ 30ರಷ್ಟು ಶುಲ್ಕ ವಿನಾಯಿತಿ ಹಾಗೂ ವಿದ್ಯಾರ್ಥಿಗಳಿಗೆ ಒಂದು ತಿಂಗಳ ವಸತಿ ಸಹಿತ ಕೋರ್ಸ್‌ಗೆ ಶೇ 75ರಷ್ಟು ವಿನಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ‘ಲೆಕ್ಕ ಪರಿಶೋಧಕರು ಈ ದೇಶದ ಆರ್ಥಿಕ ಕಲಾಕಾರರಾಗಿದ್ದಾರೆ. ಈ ದೇಶದ ಆರ್ಥಿಕ ಪ್ರಗತಿಗೆ ಇವರ ಕೊಡುಗೆ ದೊಡ್ಡದು’ ಎಂದರು. ಐಸಿಎಐ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ ಅಧ್ಯಕ್ಷ ಚಿನ್ನ ಮಸ್ತಾನ್ ಸಮಾವೇಶ ಉದ್ಘಾಟಿಸಿದರು. ಮಂಗಳೂರು ಶಾಖೆಯ ಅಧ್ಯಕ್ಷ ಪ್ರಸನ್ನ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಪ್ರಶಾಂತ ಪೈ, ಪ್ರಾದೇಶಿಕ ಸಮಿತಿ ಸದಸ್ಯೆ ಗೀತಾ ಎ.ಬಿ, ಡೇನಿಯಲ್ ಪಿರೇರಾ ಇದ್ದರು